ಅಲಹಾಬಾದ್: ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಿರುವ ವಿಚಾರದಲ್ಲಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ಸಲ್ಲಿಸಿರುವ ತಕರಾರು ಅರ್ಜಿಯ ಕುರಿತು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಹಿಂದೂಗಳಿಗೆ ಪೂಜೆ ಮುಂದುವರಿಸಲು ಅವಕಾಶ ನೀಡಿದೆ.
ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ ಎಐಎಂಸಿ ಸಲ್ಲಿಸಿದ ತಕರಾರು ಅರ್ಜಿಯ ವಾದ, ವಿವಾದಗಳು ನಡೆದು, ಫೆ.26ಕ್ಕೆ ತೀರ್ಪು ಕಾಯ್ದಿರಿಸಲಾಗಿತ್ತು. ಸದ್ಯ ಪೂಜೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಹಿಂದೂಗಳ ಪೂಜೆ ಮುಂದುವರಿಯಲಿದೆ.
ಹಿಂದೂಗಳ ಪರವಾಗಿ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ಸಿಎಸ್ ವೈದ್ಯನಾಥನ್ ಮತ್ತು ವಿಷ್ಣು ಶಂಕರ್ ಜೈನ್ ಅವರು ವಾದ ಮಂಡಿಸಿದ್ದಾರೆ. ಮುಸ್ಲಿಮರ ಪರವಾಗಿ ವಕೀಲ ಸೈಯದ್ ಫರ್ಮಾನ್ ಅಹ್ಮದ್ ನಖ್ವಿ ಮತ್ತು ವಕೀಲ ಪುನೀತ್ ಗುಪ್ತಾ ವಾದ ಮಂಡಿಸಿದ್ದಾರೆ.