ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ 3 ಕೆಜಿ 400ಗ್ರಾಂ ತೂಕದ ಚಿನ್ನದ ಪ್ರಭಾವಳಿ ಸಮರ್ಪಿಸಿದ ದಂಪತಿಗಳು

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಾಬಾದ್‌ನ ದಂಪತಿಗಳು ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದ್ದಾರೆ.

ಎ.ಆರ್ ಮಹೇಶ್- ರಾಧಿಕಾ ರೆಡ್ಡಿ ದಂಪತಿಗಳು 1 ಕೆಜಿ 200 ಗ್ರಾಂ ಚಿನ್ನ ಹಾಗೂ 3 ಕೆಜಿ 200ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 3 ಕೆಜಿ 400ಗ್ರಾಂ ತೂಕದ ಚಿನ್ನದ ಪ್ರಭಾವಳಿಯನ್ನು ಶ್ರೀದೇವರಿಗೆ ಅರ್ಪಿಸಿದ್ದಾರೆ. ಜೊತೆಗೆ ಶ್ರೀ ಕ್ಷೇತ್ರಕ್ಕೆ 4 ರಿಂದ 5ಲಕ್ಷ ರೂ. ಮೊತ್ತದ ಹೂವಿನ ಉಡುಗೊರೆ ನೀಡಿದ್ದಾರೆ.

ಇವರು ಈ ಹಿಂದೆ ಕೂಡ ಶ್ರೀ ಕ್ಷೇತ್ರದ ಭೋಜನ ಶಾಲೆಗೆ ಅಡುಗೆ ತಯಾರಿಸಲು ಬೇಕಾಗುವ ಪರಿಕರಗಳನ್ನು, 4 ಪುಂಗನೂರು ಗೋವುಗಳು ನೀಡಿದ್ದರು.


ದಂಪತಿಗಳು ಸಮರ್ಪಿಸಿದ ಚಿನ್ನದ ಪ್ರಭಾವಳಿಯನ್ನು ಪ್ರಸಿದ್ಧ ಶಿಲ್ಪಿಗಳಾದ ಅಲಗ್ ರಾಜ್ ಸ್ಥಪತಿ ಪದ್ಮಾಲಯ ಆರ್ಟ್ ಹಾಗೂ ಕ್ರಾಫ್ಟ್ ರಾಜೇಶ್ವರಿನಗರ ಬೆಂಗಳೂರು ಇವರಿಂದ ಮಾಡಿಸಲಾಗಿದ್ದು, ಬಹಳ ಸುಂದರವಾಗಿ ಮೂಡಿ ಬಂದಿದೆ. ಇವರು ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೇ ಇತರೆ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕೊಲ್ಲೂರು, ಶಿರಡಿ, ರಾಜರಾಜೇಶ್ವರಿ ಬೆಂಗಳೂರು ಸೆರಿದಂತೆ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಚಿನ್ನದ ಕೆತ್ತನೆಯ ಕೆಲಸವನ್ನು ಮಾಡಿದ್ದಾರೆ.

ಚಿನ್ನದ ಪ್ರಭಾವಳಿ ಸಮರ್ಪಣೆಯ ಸಂದರ್ಭದಲ್ಲಿ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ಪಿ.ಎಸ್.ಎನ್ ಪ್ರಸಾದ್, ಮನಮೋಹನ್ ರೈ, ಶ್ರೀ ವತ್ಸ ಬೆಂಗಳೂರು, ವನಜಾ ವಿ ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಲೋಕೇಶ್ ಮಂಡೋಕಜೆ, ಮನೋಜ್, ಸತೀಶ್ ಕೂಜುಕೊಡು, ಶ್ರೀ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮುಂತಾದವರು ಉಪಸ್ಥಿತರಿದ್ದರು.

error: Content is protected !!