ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಣೆ

ಬೆಂಗಳೂರು: ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಗೆ ಫೆ.17 ಕೊನೆಯ ದಿನ ಎಂದು ಹೇಳಲಾಗಿತ್ತು. ಹೀಗಾಗಿ ವಾಹನ ಸವಾರರು ಕಳೆದ 5 ದಿನಗಳಿಂದ ಹೆಚ್‌ಎಸ್‌ಆರ್‌ಪಿ ಮಾಡಲು ಹರಸಾಹಸ ಪಡುತ್ತಿದ್ದರು. ಸರ್ವರ್ ಗಳು ಬ್ಯುಸಿಯಾಗಿದ್ದು ಎಷ್ಟೋ ವಾಹನಗಳ ಹೆಚ್‌ಎಸ್‌ಆರ್‌ಪಿ ಇನ್ನೂ ಬಾಕಿ ಇದೆ. ಈ ಹಿನ್ನಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಮಾತನಾಡಿ, “ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17, 2024ಕ್ಕೆ ಗಡುವು ಮುಕ್ತಾಯವಾಗಲಿದೆ. ಹೊಸ ನಂಬರ್ ಪ್ಲೇಟ್ ಅಳವಡಿಕೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ವಾಹನಗಳಿಗೆ ಅವಧಿ ವಿಸ್ತರಣೆ ಮಾಡುತ್ತೇವೆ. 3 ತಿಂಗಳು ಅವಧಿ ಹೆಚ್ಚುವರಿಯಾಗಿ ನೀಡುತ್ತಿದ್ದೇವೆ ಎಂದಿದ್ದಾರೆ.

ನಿಗದಿತ ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ ಅಳವಡಿಸದಿದ್ದಲ್ಲಿ ಮೊದಲನೇ ಅಪರಾಧಕ್ಕೆ 500 ರೂ ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ 1,000 ರೂ.ಯಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಾಹನಗಳಿಗೆ ಹೆಚ್.ಎಸ್.ಆರ್.ಪಿ ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು ಔಇಒಗಳ ಅಧಿಕೃತ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಪೋರ್ಟಲ್ ಮೂಲಕ ವಾಹನದ ಮಾಲೀಕರು ಆನ್‌ಲೈನ್‌ನಲ್ಲಿ ಮಾತ್ರ ಶುಲ್ಕ ಪಾವತಿಸಬೇಕು. ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇ-ವಾಹನ್ ಪೋರ್ಟಲ್‌ನಲ್ಲಿ ಇರುವ ವಾಹನದ ವಿವರಗಳು ಹಾಗೂ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಆನ್‌ಲೈನ್ ಪೋರ್ಟಲ್‌ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಹೇಳಿದ್ದಾರೆ.

error: Content is protected !!