ಧರ್ಮಸ್ಥಳ: ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ

ಬೆಳ್ತಂಗಡಿ: ಪ್ಲಾಸ್ಟಿಕ್ ಬಳಕೆ ಮತ್ತು ಪ್ಲಾಸ್ಟಿಕ್ತ್ಯಾಜ್ಯ ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದ್ದು ಇಂತಹ ಪವಿತ್ರ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿ ಧರ್ಮಸ್ಥಳ, ರಾಜ್ಯಕ್ಕೆ ಸ್ವಚ್ಛ, ಸುಂದರ ಗ್ರಾಮವಾಗಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಲಿ. ತನ್ಮೂಲಕ ಇಡೀ ರಾಜ್ಯವೇ ಪ್ಲಾಸ್ಟಿಕ್ ಬಳಕೆ ಮುಕ್ತ ರಾಜ್ಯವಾಗಬೇಕು ಎಂದು ಅರಣ್ಯ ಮತ್ತು ಪರಿರಸ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಫೆ. 05ರಂದು ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮವನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿ ಮಾತನಾಡಿದರು.
ಪ್ಲಾಸ್ಟಿಕ್ ಮಾರಾಟ ಮತ್ತು ಖರೀದಿ ಮತ್ತು ಬಳಕೆ ಸಂಪೂರ್ಣ ನಿಷೇದಿಸಬೇಕು. ಯಾತ್ರಿಕರು ನೇತ್ರಾವತಿ ನದಿಯಲ್ಲಿ ಕೂಡಾ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಬಿಸಾಡುವುದನ್ನು ಅವರು ಖಂಡಿಸಿದರು. ಧರ್ಮಸ್ಥಳದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಹಾಗೂ ಮಹಿಳಾ ಸಬಳಿಕರಣಕ್ಕೆ ಹೆಗ್ಗಡೆಯವರು ನೀಡಿದ ಸಹಕಾರವನ್ನು ಅವರು ಕೃತಜ್ಞತೆಯೊಂದಿಗೆ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗಾಗಿ ಒಂದು ವಾರದೊಳಗೆ ಎರಡು ಹೊಸ ಯಂತ್ರಗಳನ್ನು ಖರೀದಿಸಿ ತ್ಯಾಜ್ಯ ಸಂಗ್ರಹ ಮಾಡಲಾಗುವುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ದುರಸ್ತಿಗೆ ಮರುಬಳಕೆ ಮಾಡಲಾಗುವುದು. ವಿದೇಶಗಳಲ್ಲಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ನಮ್ಮಲ್ಲಿಯೂ ಸ್ವಚ್ಛತೆ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರೂ ವಾರದಲ್ಲಿ ಎರಡು ದಿನ ಶನಿವಾರ-ಭಾನುವಾರ ತಮ್ಮ ಮನೆ ಮತ್ತು ಪರಿಸರ ಸ್ವಚ್ಛತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಂಗಳೂರು ವೃತ್ತ ಸಿ.ಎಫ್.ಒ. ವಿ. ಕರಿಕಳನ್, ಕೆ.ಎಸ್.ಡಿ.ಸಿ. ಕಮಲಾ ಕರಿಕಳನ್, ಡಿ.ಎಫ್.ಒ. ಅಂಥೋನಿ, ಎಸ್. ಮರಿಯಪ್ಪ, ಎ.ಸಿ.ಎಫ್ ಶ್ರೀಧರ್, ಬೆಳ್ತಂಗಡಿ ವಲಯಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪ್ಪಿನಂಗಡಿ ವಲಯಅರಣ್ಯ ಅಧಿಕಾರಿ, ಜಯಪ್ರಕಾಶ್ ಕೆ.ಕೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

error: Content is protected !!