ಬೆಳ್ತಂಗಡಿ: ವೇಣೂರಿನ ಕಲ್ಲಾಜೆಯ ಪಟಾಕಿ ತಯಾರಿಕಾ ಘಟಕದಲ್ಲಿ ಜ.28ರಂದು ಸಂಭವಿಸಿದ ಸ್ಟೋಟಕ್ಕೆ ಸಂಬಂಧಿಸಿದಂತೆಸೇಫ್ಟಿ ಮೆಜರ್ ತೆಗೆದುಕೊಳ್ಳಲಿಲ್ಲವೆಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಇಂದು ಕೂಡ ಪರಿಶೀಲನೆ ನಡೆಸಿ ಬಳಿಕ ಪ್ರತಿಕ್ರಿಯೆ ನೀಡಿದ ಅವರು ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಉತ್ಸವಗಳಿಗೆ ಮಾಲಕ ಬಶೀರ್ ಅವರಿಂದಲೇ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಸದ್ಯ ಮಾಲಕರಿಗೆ ಮೈಸೂರಿನಿಂದ ಆರ್ಡರ್ ಬಂದಿತ್ತು. ಮೈಸೂರಿನ ಆರ್ಡರ್‌ಗಾಗಿ ದೊಡ್ಡ ಸೈಜ್ ಪಟಾಕಿ ಮಾಡುತ್ತಿದ್ದರು. ಒಂದು ಸ್ಥಳದಲ್ಲಿ ಪಟಾಕಿ ತಯಾರಿ ಮಾಡಿ, ಮತ್ತೊಂದು ಸ್ಥಳದಲ್ಲಿ ಶೇಖರಣೆ ಮಾಡುತ್ತಿದ್ದರು. ಕಡಿಮೆ ತೀವ್ರತೆಯ ಸುಡುಮದ್ದು ಒಂದೇ ಜಾಗದಲ್ಲಿದ್ದ ಪರಿಣಾಮ ಭೀಕರವಾದ ಸ್ಟೋಟ ಸಂಭವಿಸಿದೆ. ಘಟನೆ ಬಗ್ಗೆ ಬಶೀರ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಾವನ್ನಪ್ಪಿರುವ ಮೂವರ ಕುಟುಂಬದವರಿಗೂ ಮಾಹಿತಿ ನೀಡಿದ್ದೇವೆ. ಮೃತರ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ಮಾಡುತ್ತೇವೆ. ಸ್ಥಳೀಯರ ದೂರನ್ನು ಪಡೆದುಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.