‘ಸಂವಿಧಾನದ ಮೂಲ ಪ್ರತಿಯಲ್ಲಿ ರಾಮಾಯಣದ ಉಲ್ಲೇಖವಿದೆ: ರಾಮನೇ ಜನರ ಹಕ್ಕನ್ನು ರಕ್ಷಿಸುವ ರಕ್ಷಕ ಎಂದಿದ್ದಾರೆ ಅಂಬೇಡ್ಕರ್’ ಗಣರಾಜೋತ್ಸವ ದಿನಾಚರಣಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಸಂವಿಧಾನದ ಮೂಲ ಪ್ರತಿಯಲ್ಲಿ ರಾಮಾಯಣದ ಉಲ್ಲೇಖವಿದೆ, ಮೂಲಭೂತ ಹಕ್ಕುಗಳನ್ನು ವಿವರಿಸುವಾಗ ರಾಮ, ಸೀತೆ ಲಕ್ಷ್ಮಣನ ಭಾವಚಿತ್ರ ಇಟ್ಟು ರಾಮನೇ ಜನರ ಹಕ್ಕನ್ನು ರಕ್ಷಿಸುವ ರಕ್ಷಕ ಎಂಬ ಮಾತನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಿನಿವಿಧಾನ ಸೌಧದ ವಠಾರದಲ್ಲಿ ತಾಲೂಕು ಮಟ್ಟದ ಗಣರಾಜೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ದೇಶದ ಸಂವಿಧಾನಕ್ಕಿಂತಲೂ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವೆಂಬ ಹೆಗ್ಗಳಿಕೆ ಪಡೆದಿದೆ. ಎಲ್ಲಾ ಪ್ರಜೆಗಳಿಗೆ ಹಕ್ಕು, ಕರ್ತವ್ಯ ನೀಡಿ ಭವಿಷ್ಯದ ಭಾರತದ ಕಲ್ಪನೆಯನ್ನು ಕೊಟ್ಟಿದ್ದಾರೆ. ಈ ಸಂವಿಧಾನದ ಆಧಾರದಲ್ಲಿಯೇ ಬುಡಕಟ್ಟು ಸಮುದಾಯದ ತಾಯಿ ಕೂಡ ಇವತ್ತು ರಾಷ್ಟ್ರಪತಿ  ಆಗುವುದಕ್ಕೆ ಸಾಧ್ಯವಾಗಿದೆ ಎಂದರು.

ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಪ್ರತಿಯ ಮೊದಲ ಪುಟದಲ್ಲಿ ರಾಮ, ಸೀತೆ, ಲಕ್ಷ್ಮಣನ ಭಾವಚಿತ್ರ ಹಾಕಿ ಮೂಲ ಪ್ರತಿಯ ಸಂವಿಧಾನವನ್ನು ರಚನೆ ಮಾಡಿದರು. ರಾಮನೇ ಜನರ ಹಕ್ಕನ್ನು ರಕ್ಷಿಸುವ ರಕ್ಷಕ ಎಂದು ಹೇಳಿದ್ದಾರೆ. ರಾಮ ಈ ದೇಶಕ್ಕೆ ಪೂರಕ ಎಂಬ ಮಾತನ್ನು ಅವರು ಸಂವಿಧಾನ ರಚನಾ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು.

ದೇಶ ಜಗತ್ ಬಂದ್ಯ ಹೊಸ್ತಿಲಲ್ಲಿ ಇರುವಂತಹ ಈ ಕಾಲದಲ್ಲಿ ದೇಶ, ದೇಶಗಳ ಮಧ್ಯೆ ಯುದ್ದಗಳಾದಾಗ ಭಾರತ ಮಧ್ಯಸ್ಥಿಕೆ ವಹಿಸುತ್ತಿದೆ ಎಂದರೆ ಅದು ಭಾರತದ ಸಂವಿಧಾನದ ಶಕ್ತಿ. ರಾಜ್ಯದ ಕಾಂಗ್ರೆಸ್ ಸರಕಾರ ಗ್ರಾಮೀಣ ಅಭಿವೃದ್ಧಿಯನ್ನು ಸಂವಿಧಾನದ ಆಶಯದಂತೆ ನೆರವೇರಿಸಲಿ ಎಂದರು.

ಧ್ವಜಾರೋಹಣವನ್ನು ತಹಶೀಲ್ದಾರ್ ಪೃಥ್ವಿ ಸಾನಿಕಂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಪೊಲೀಸ್ ಇಲಾಖೆ, ಗೃಹರಕ್ಷಕ ದಳದಿಂದ ಪಥ ಸಂಚಲನ ನಡೆಯಿತು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಯನ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್.ಕೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಜನಪ್ರತಿನಿಧಿಗಳು ಅನೇಕರು ಉಪಸ್ಥಿತರಿದ್ದರು.

error: Content is protected !!