ಬೆಳ್ತಂಗಡಿ : ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್ ನ್ನು ಜೆಸಿಬಿ ಮೂಲಕ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದ ತಂಡ ನೆಲಸಮಗೊಳಿಸಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಹಾಲಿನ ಡೈರಿ ಹಿಂಭಾಗದ ಸರ್ವೆ ನಂಬರ್ 149/3A ನಲ್ಲಿ 11 ಸೆಂಟ್ಸ್ ಖಾಲಿ ಜಾಗದಲ್ಲಿ ಅಬುಸಾಲಿ ಮಕ್ಕಳಾದ ರೌಫ್ ಮತ್ತು ನಿಸರ್ ಸಹೋದರರು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಗೆ ದೂರು ಬಂದಿದ್ದು ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಜ.18 ರಂದು ಜಾಗದ ಪರಿಶೀಲನೆಗೆ ತೆರಳಿದ್ದರು ಈ ವೇಳೆ ರೌಫ್ ಮತ್ತು ನಿಸರ್ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು.ಬಳಿಕ ಕಂದಾಯ ನಿರೀಕ್ಷಕರಿಗೂ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜ.19 ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಜ.24 ರಂದು ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದ ಕಂದಾಯ ಇಲಾಖೆಯ ಸಿಬ್ಬಂದಿಗಳು ಜ.25 ರಂದು ಸಂಜೆ (ಇಂದು) ಜೆಸಿಬಿ ಬಳಸಿ ಅಕ್ರಮ ಶೆಡ್ ನೆಲಸಮಗೊಳಿಸಿದರು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಬೆಳ್ತಂಗಡಿ ಪೊಲೀಸರು ಭದ್ರತೆ ನೀಡಿದ್ದರು.