ಬೆಳ್ತಂಗಡಿ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯುವ ದಿನವೇ ಎಷ್ಟೋ ಗರ್ಭಿಣಿ ತಾಯಂದಿರು ಆ ದಿನವೇ ನಮಗೆ ಮಗು ಜನಿಸಬೇಕು ಎಂದು ಆಸೆ ಪಟ್ಟಿದ್ದಾರೆ. ಇನ್ನೂ ಕೆಲವರು ಅಂದೇ ಆಪರೇಷನ್ ಮಾಡಿಸಿಕೊಂಡ ಮಗುವನ್ನು ತಮ್ಮ ಮಡಿಲಿಗೆ ಹಾಕೊಂಡಿದ್ದಾರೆ. ಆದರೆ ಕೆಲವರು ಅದೃಷ್ಟವೇ ಎಂಬಂತೆ ಅಂದೇ ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಘಟನೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ನಡೆದಿದೆ.
ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಅವರಿಗೆ ಉಜಿರೆ ಬೆನಕ ಆಸ್ಪತ್ರೆಯ ವೈದ್ಯರು ಫೆ.03ಕ್ಕೆ ಹೆರಿಗೆಗೆ ದಿನಾಂಕ ತಿಳಿಸಿದ್ದರು. ಆದರೆ ಪವಿತ್ರ ಅವರು ಜ.22 ರಂದು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಬೆಳಗ್ಗೆ 6:20 ಕ್ಕೆ ಗಂಡು ಮಗುವಿಗೆ (ನಾರ್ಮಲ್ ಡೆಲಿವರಿ) ಜನ್ಮ ನೀಡಿದ್ದಾರೆ. ಈ ವಿಚಾರ ತಿಳಿದ ಮಗುವಿನ ತಂದೆ ಸುರೇಶ್ ಸಂತಸಗೊಂಡು ಅಂದೇ ತಮ್ಮ ಉದ್ಯೋಗ ಸ್ಥಳ ಬೆಂಗಳೂರಿನಿಂದ ಉಜಿರೆ ಆಸ್ಪತ್ರೆಗೆ ಬಂದಿದ್ದಾರೆ.
ಶ್ರೀ ರಾಮನ ಪ್ರಾಣಪ್ರತಿಷ್ಠಾಪನಾ ದಿನದಂದೇ ಮಗು ಹುಟ್ಟುವ ನಿರೀಕ್ಷೆ ಕುಟುಂಬಕ್ಕಿರಲಿಲ್ಲ. ಆದರೆ ಈ ಶುಭ ದಿನವೇ ಮಗು ಹುಟ್ಟಿದ್ದರಿಂದ ಮಗುವಿಗೆ ‘ಶ್ರೀರಾಮ’ ಎಂದೇ ಹೆಸರಿಡಲು ತಂದೆ, ತಾಯಿ ನಿರ್ಧರಿಸಿದ್ದಾರೆ.