5 ಮಕ್ಕಳಿದ್ದರೂ ಶವಗಾರದಲ್ಲಿ ಅನಾಥವಾದ ತಂದೆಯ ಮೃತದೇಹ: ತಂದೆಯ ಶವ ನಮಗೆ ಬೇಡವೆಂದ ಮಕ್ಕಳು..!

ಬೆಳ್ತಂಗಡಿ : ಬೆಂಗಳೂರಿನ ವ್ಯಕ್ತಿಯೊಬ್ಬರು ಧರ್ಮಸ್ಥಳದ ಖಾಸಗಿ ಲಾಡ್ಜ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ಸೇರಿಸಿದರೂ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರು ಉತ್ತರದ 06,13 ನೇ ‘ಎ’ ಕ್ರಾಸ್ , ಹೊಯ್ಸಳ ನಗರ ಸುಂಕದಕಟ್ಟೆ ನಿವಾಸಿ ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂಬವರ ಮಗನಾದ ಹೆಚ್.ವಿ.ಚಂದ್ರಶೇಖರ್ (89) ಮನೆಯಲ್ಲಿ ಮಕ್ಕಳ ಜೊತೆ ನಡೆದ ಕ್ಷುಲಕ ವಿಚಾರದ ಗಲಾಟೆಯಿಂದ ಮನನೊಂದು ಮನೆಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದರು.  ಬಳಿಕ ಧರ್ಮಸ್ಥಳದ ಖಾಸಗಿ ಲಾಡ್ಜ್ ನಲ್ಲಿ  ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ವ್ಯಕ್ತಿಯನ್ನು ನೋಡಿದ ರೂಂ ಬಾಯ್ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಧರ್ಮಸ್ಥಳ ಪೊಲೀಸರು ಮನೆಯವರನ್ನು ಸಂಪರ್ಕಿಸಿ ಸಾವನ್ನಪ್ಪಿದ ವಿಚಾರವನ್ನು ತಿಳಿಸಿದ್ದಾರೆ. ಆದರೆ ಮಕ್ಕಳು ನಮಗೆ ನಮ್ಮ ತಂದೆ ಬೇಡ , ಅವರ ಶವ ನಾವು ತರಲು ಬರುವುದಿಲ್ಲ ಎಂದಿದ್ದಾರೆ.

ಸದ್ಯ 5 ಜನ ಮಕ್ಕಳಿದ್ದರೂ ತಂದೆಯ ಮೃತದೇಹ ಮಂಗಳೂರು ಶವಗಾರದಲ್ಲಿ ಅನಾಥವಾಗಿದೆ.

error: Content is protected !!