ಅಯೋಧ್ಯೆ: ಕೋಟ್ಯಾಂತರ ರಾಮ ಭಕ್ತರ ಕನಸಾದ ರಾಮ ಮಂದಿರ ನಿರ್ಮಾಣವಾಗಿ ಈಗ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಜ.16ರಂದು ಪ್ರಾಯಶ್ಚಿತ್ತ ಹಾಗೂ ಕರ್ಮಕುಟಿ ಪೂಜೆ ನೆರವೇರಿದ್ದು, ಜ.17ರಂದು ರಾಮಲಾಲಾ ವಿಗ್ರಹವನ್ನು ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಜ.18ರಂದು (ಇಂದು) ಮುಂಜಾನೆ ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ರಾಮಲಲ್ಲಾ ಮೂರ್ತಿಯನ್ನು ಕ್ರೇನ್‌ನಲ್ಲಿ ಎತ್ತುವ ಮೂಲಕ ದೇಗುಲದ ಗರ್ಭಗುಡಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಭಕ್ತರು ವೇದ ಸ್ತೋತ್ರ ಪಠಿಸಿದರು.
ಜ.19ರಂದು ಔಷಧಿವಾಸ, ಕೇಸರಧಿವಾಸ, ಘೃತಾಧಿವಾಸ, ಧಾನ್ಯಾಧಿವಾಸ ಕಾರ್ಯಗಳು ನಡೆಯಲಿದ್ದು, ಜ.22ರಂದು ರಾಮ ಮಂದಿರ ‘ಪ್ರಾಣ ಪ್ರತಿಷ್ಠಾಪನಾ’ ಕಾರ್ಯವು ಮಧ್ಯಾಹ್ನ 12:20ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. 121 ಆಚಾರ್ಯರ ನೇತೃತ್ವದಲ್ಲಿ ‘ಪ್ರಾಣ ಪ್ರತಿಷ್ಠಾಪನಾ’ ಕಾರ್ಯ ನಡೆಯಲಿದೆ.
ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೇಶದಾದ್ಯಂತದ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ಗಣ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರು ಈ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ವಿವಿಧ ದೇಶಗಳ 100 ಪ್ರತಿನಿಧಿಗಳು ಸಹ ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಅಂದಾಜು 15ರಿಂದ 200 ಕೆ.ಜಿ ತೂಕದ ರಾಮಲಲ್ಲಾ ಮೂರ್ತಿಯು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ ಲಲ್ಲಾನ ವಿಗ್ರಹವು ಕಮಲದ ದಳಗಳನ್ನು ಹೋಲುವ ಕಂಗಳು ಹಾಗೂ ಮುಖವು ಚಂದಿರನ ತೆ ಹೊಳೆಯುತ್ತದೆ ಎಂದು ಬಣ್ಣಿಸಿದ್ದಾರೆ. ತುಟಿಯಂಚಿನಲ್ಲಿ ಪ್ರಶಾಂತವಾದ ನಗು ತುಂಬಿರುವ, ಉದ್ದನೆಯ ತೋಳುಗಳು ಮೊಣಕಾಲುಗಳವರೆಗೆ ಚಾಚಿಕೊಂಡಿವೆ. ರಾಮ ಲಲ್ಲಾ ಒಂದು ಅಂತರ್ಗತ ದೈವಿಕ ಪ್ರಶಾಂತತೆ ಮತ್ತು ಅದ್ಭುತ ನೋಟ ಹೊಂದಿದೆ ಎಂದಿದ್ದಾರೆ.