ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ: “ಪಾಂಚಜನ್ಯ”ವಿಶೇಷ ಕಾರ್ಯಕ್ರಮಕ್ಕೆ ಚಾಲನೆ: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದ್ಯಮಿ ಶಶಿಧರ್ ಶೆಟ್ಟಿ:

 

 

ಬೆಳ್ತಂಗಡಿ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧನುರ್ಮಾಸವನ್ನು ಒಂದು ತಿಂಗಳ ಕಾಲ ಸಾಮೂಹಿಕವಾಗಿ ವಿಷ್ಣು ಸಹಸ್ರನಾಮ ಪಠಣ ಮಾಡುವ ಮೂಲಕ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು.

 ಮಕರ ಸಂಕ್ರಾಂತಿ ದಿನದಂದು  ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಗಣ್ಯರು:

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳೆದ 8 ವರ್ಷಗಳಿಂದ ನಾವೂರಿನ ಭಕ್ತಾದಿಗಳಿಗೆ ಶ್ರೀ ವಿಷ್ಣು ಸಹಸ್ರನಾಮದ ಪರಿಚಯ ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಠಣದ ಪಾಠವು ನಾವೂರು ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಮೂಲಕ ನಡೆದುಕೊಂಡು ಬರುತಿದ್ದು.ಇದರಿಂದಾಗಿ ನಾವೂರು ಗ್ರಾಮದ ಬಹುತೇಕ ಭಕ್ತರು ಇದೀಗ ಶ್ರೀ ವಿಷ್ಣು ಸಹಸ್ರನಾಮ ಪುಸ್ತಕವನ್ನು ನೋಡದೆ ಪಠಣ ಮಾಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ ಮತ್ತು ಮಕ್ಕಳಿಗೆ ಶ್ರೀ ಮದ್ಭಗವದ್ಗೀತಾ ಪಾಠವನ್ನು ಹೇಳಿ ಇದೀಗ ನಾವೂರಿನ ಅನೇಕ ಮಕ್ಕಳೂ ವಿಷ್ಣು ಸಹಸ್ರನಾಮದ ಜೊತೆಗೆ ಶ್ರೀ ಮದ್ಭಗವದ್ಗೀತಾ ಶ್ಲೋಕಗಳನ್ನು ಕಂಠಪಾಠ ಮಾಡುವಲ್ಲಿ ಅವಿರತವಾಗಿ ಶ್ರಮವಹಿಸುತ್ತಿರುವುದು ವಿಶೇಷವಾಗಿದೆ. ದೇವಸ್ಥಾನದಲ್ಲಿ  “ಪಾಂಚಜನ್ಯ” ಎಂಬ ಹೊಸ ಯೋಜನೆಯನ್ನು ಮಕರ ಸಂಕ್ರಾಂತಿಯ ಶುಭ ದಿನದಂದು  ಕಾರ್ಯರೂಪಕ್ಕೆ ತಂದಿರುವುದು ಇನ್ನೊಂದು ವಿಶೇಷತೆಯಾಗಿದೆ.

 

 

ಪ್ರತಿ ಮನೆಯಲ್ಲಿ ಸೂರ್ಯೋದಯಕ್ಕಿಂತ ಮೊದಲು ಮತ್ತು ಸೂರ್ಯಾಸ್ತದ ಸಮಯದಲ್ಲಿ ತುಳಸಿ ಕಟ್ಟೆಗೆ ದೀಪ ಇಟ್ಟು ಮೂರು ಬಾರಿ ಶಂಖನಾದ ಮೊಳಗಿಸುವ ನಮ್ಮ ಹಿರಿಯರ ಕಾಲದ ಆಚರಣೆಯನ್ನು ಗ್ರಾಮ ಮಟ್ಟದಲ್ಲಿ ಪ್ರತಿ ಮನೆಯಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಪರಿಕಲ್ಪನೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.ಪ್ರಾರಂಭಿಕವಾಗಿ ಗೀತಾ ತರಗತಿಗೆ ಹಾಗೂ ವಿಷ್ಣು ಸಹಸ್ರನಾಮ ತರಗತಿಗೆ ನಿರಂತರವಾಗಿ ಬರುವ ಮಕ್ಕಳಿಗೆ ಶಂಖವನ್ನು ನೀಡುವ ಮೂಲಕ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ನಾವೂರು ದೇವಸ್ಥಾನಕ್ಕೆ ಶ್ರೀ ಸುರ್ಯ ಸದಾಶಿವ ರುದ್ರ ದೇವಸ್ಥಾನದ ವತಿಯಿಂದ ಮನೆಮನೆಗೆ ವಿಷ್ಣು ಸಹಸ್ರನಾಮದ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸುರ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ| ಸತೀಶ್ಚಂದ್ರ ಸುರ್ಯಗುತ್ತು ಇವರು ಪುಸ್ತಕಗಳನ್ನು ನೀಡಿ ಚಾಲನೆ ನೀಡಿದರು.

 

ಶ್ರೀ ಗೊಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವದ
ಆಮಂತ್ರಣ ಪತ್ರಿಕೆ ಬಿಡುಗಡೆಯನ್ನೂ ಇದೇ ಸಂದರ್ಭದಲ್ಲಿ ಮಾಡಲಾಯಿತು. ಡಾ| ಸತೀಶ್ಚಂದ್ರ ಸುರ್ಯಗುತ್ತು ಇವರು ದೇವಸ್ಥಾನದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದೆಯೂ ಇದೇ ರೀತಿಯಲ್ಲಿ ಕೈ ಜೋಡಿಸುತ್ತೇವೆ ಎಂದು ತಿಳಿಸಿದರಲ್ಲದೇ ಇಲ್ಲಿನ ಕಾರ್ಯ ಚಟುವಟಿಕೆಗಳು ಇತರರಿಗೆ ಮಾದರಿಯಾಗಿವೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ ಶ್ರೀ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ ದೇಶದ ಯಾವುದೇ ದೇವಸ್ಥಾನದಲ್ಲಿ ನಡೆಯದ ಧಾರ್ಮಿಕ ಕಾರ್ಯಕ್ರಮಗಳು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರುಗುತ್ತಿದೆ. ಶ್ರೀ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಣ ಮಾಡುತ್ತಿರುವುದು, ಧನುರ್ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ 5.00ರಿಂದ 6ರ ತನಕ ಮತ್ತು ಪ್ರತಿ ಸೋಮವಾರ ಅಂತರ್ಜಾಲದ ಮೂಲಕ ಮಾಡುತ್ತಿರುವುದು, ಮಕ್ಕಳಿಗೆ ಶ್ರೀಮದ್ಭಗವದ್ಗೀತೆಯ ಶ್ಲೋಕಗಳ ಪಾಠ ಅತ್ಯಪೂರ್ವ ಕಾರ್ಯಕ್ರಮವಾಗಿದೆ. ಇದೀಗ ಮನೆಮನೆಗೆ ಪಾಂಚಜನ್ಯ ಇದೊಂದು ವಿನೂತನ ಯೋಜನೆ. ಪ್ರತಿ ಮನೆಯಲ್ಲಿ ಬೆಳಿಗ್ಗೆ ಸೂರ್ಯೋದಯದ ಮೊದಲು ಮತ್ತೆ ಸಂಜೆ ಸೂರ್ಯಾಸ್ತ ಸಮಯದಲ್ಲಿ ತುಳಸಿ ಕಟ್ಟೆಗೆ ದೀಪ ಇಟ್ಟು 3 ಬಾರಿ ಶಂಖನಾದ ಮಾಡುವ ಪ್ರಯತ್ನ ವಂದನೀಯ”ಎಂದು ಸಂತಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಶ್ರೀ ಅನಂತ ಭಟ್ ಮಚ್ಚಿಮಲೆ, ರೊ। ವಿದ್ಯಾ ಕುಮಾರ್,ರೊ।ಶ್ರೀ ಡಿ.ಎಂ. ಗೌಡ, ಡಾ| ದಯಾಕರ್,ಡಾ।ಅನಿತಾ ದಯಾಕರ್,ಡಾ।ಕವಿತಾ,ತಿಮ್ಮಪ್ಪ ಗೌಡ ಬೆಳಾಲು, ಖ್ಯಾತ ಉದ್ಯಮಿ ಯಶೋಧರ ಬಂಗೇರ, ಸುಂದರ ಪೂಜಾರಿ ಕುತ್ರಬೆಟ್ಟು , ವಿವೇಕಾನಂದ ಗೌಡ ಬೋಜಾರ, ಎಸ್.ಎನ್ . ಭಟ್ ಬೊಳಿಯಂಜಿ, ಯುವರಾಜ ಭಂಡಾರಿ ಇಡ್ಯಾಲ, ಅರ್ಚಕರಾದ ಶ್ರೀ ಅಶ್ವಿನ್ ಭಟ್, ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟ್ ನ ನಿಕಟ ಪೂರ್ವ ಅಧ್ಯಕ್ಷ ಎ.ಬಿ.ಉಮೇಶ, ಮಿತ್ತಬಾಗಿಲು ಗ್ರಾ ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,ಜಾತ್ರೋತ್ಸವ ಸಮಿತಿ ಅಧ್ಯಕ್ಷರು, ಧನುರ್ಮಾಸ ಪರ್ಯಂತ ಸಾಮೂಹಿಕವಾಗಿ ವಿಷ್ಣುಸಹಸ್ರನಾಮ ಪಠಣವನ್ನು ನಡೆಸಿಕೊಟ್ಟ ಡಾ| ಪ್ರದಿಪ್ ಎ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ ಧನ್ಯವಾದ ಸಲ್ಲಿಸಿ ಟ್ರಸ್ಟ್ ನ ನಿಕಟಪೂರ್ವ ಕಾರ್ಯದರ್ಶಿ ಹರೀಶ್ ಕಾರಿಂಜ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸದಸ್ಯರು ಊರ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

 

ಇದನ್ನೂ ಓದಿ:

ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮ, ಗೋ ಶಾಲೆಯಲ್ಲಿ ಆಚರಣೆ: ಉದ್ಯಮಿ ಶಶಿಧರ್ ಶೆಟ್ಟಿ ದಂಪತಿಗಳಿಂದ ರೂ 1.50 ಲಕ್ಷ ಮೌಲ್ಯದ ಯಂತ್ರ ಕೊಡುಗೆ:

 

 

error: Content is protected !!