ಚಾಲಕರ ನಿದ್ರೆ ಮಂಪರಿಗೆ ಕೆ ಎಸ್ .ಆರ್. ಟಿ. ಸಿ ಬ್ರೇಕ್:ರಾತ್ರಿ ಪಾಳಿಯ ಕರ್ತವ್ಯ ನಿರತ ಚಾಲಕರಿಗೆ ಥರ್ಮೋ ಫ್ಲಾಸ್ಕ್ ..!

 

 

ಬೆಂಗಳೂರು:  ಪ್ರಯಾಣಿಕರ ಹಾಗೂ ಸಿಬ್ಬಂದಿಗಳ  ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೆ ಎಸ್ ಆರ್ ಟಿ ಸಿ  ಇದೀಗ ರಾತ್ರಿ ಕಾರ್ಯಾಚರಣೆಯಲ್ಲಿ ಅಪಘಾತರಹಿತ ಸೇವಾ ಖಾತ್ರಿಗೆ ಮುಂದಾಗಿದೆ. ಚಾಲಕರ ನಿದ್ರಾ ಮಂಪರು ತಪ್ಪಿಸಲು ಥರ್ಮೋ ಫ್ಲಾಸ್ಕ್ ನೀಡಿದೆ. ಮಾರ್ಗ ಮಧ್ಯದಲ್ಲಿ ಹೋಟೆಲ್ ಇರಲಿ ಇಲ್ಲದಿರಲಿ, ಚಾಲಕರು ಚಹಾ, ಕಾಫಿ ಹೀರಿ ವಾಹನ ಚಲಾಯಿಸುವ ಮೂಲಕ ಸುರಕ್ಷಿತ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ.

ರಾತ್ರಿ ಮಾರ್ಗಗಳಲ್ಲಿ ಚಾಲನೆ ಮಾಡುವ ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿಲಿಯ ಥರ್ಮೋ ಫ್ಲಾಸ್ಕ್ ಅನ್ನು 1,600 ಅನುಸೂಚಿಗಳಲ್ಲಿ ನೀಡಿದೆ. ನಿಗಮಕ್ಕೆ ಪ್ರಯಾಣಿಕರು ಹಾಗೂ ತನ್ನ ಸಿಬ್ಬಂದಿಯ ಸುರಕ್ಷತೆ ಪ್ರಥಮ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ತನ್ನ ಕಾರ್ಯಾಚರಣೆ ಹಾಗೂ ಸಂಬಂಧಿಸಿದ ಇತರೆ ಅಂಶಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಪರಿಹಾರಾರ್ಥ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಈಗ ಥರ್ಮೋ ಫ್ಲಾಸ್ಕ್ ನೀಡಲಾಗಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ನಿಗಮದ ವಾಹನಗಳು ರಾತ್ರಿ ವೇಳೆ ಸಂಚಾರ ಇದ್ದಾಗ ಬೆಳಗಿನ ಜಾವ 3ರಿಂದ 4 ಗಂಟೆಯ ಸಮಯದಲ್ಲಿ ಹೆಚ್ಚು ಅಪಘಾತಕ್ಕೀಡಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಗಣಿಸಿ ಪ್ರಯಾಣಿಕರಿಗೆ ಸುರಕ್ಷಿತ ಸೇವೆ ಒದಗಿಸುವ ಸಲುವಾಗಿ, ಚಾಲಕರಿಗೆ ನೆರವಾಗುವುದು ಹಾಗೂ ಅವರ ಕಾರ್ಯಕ್ಷಮತೆ ಉತ್ತಮ ಪಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ರಿಫ್ರೆಶ್​ ಆಗಲು ಕಾಫಿ, ಟೀ ಸೇವಿಸಿ (ಆ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಯಾವುದೇ ಹೋಟೆಲ್​ಗಳ ಲಭ್ಯತೆ ಇರದ ಕಾರಣ) ವಾಹನವನ್ನು ಸುರಕ್ಷಿತವಾಗಿ ಚಲಾಯಿಸಬಹುದು. ಇದಕ್ಕಾಗಿ ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿ.ಲೀ. ಥರ್ಮೋ ಫ್ಲಾಸ್ಕ್ ಒದಗಿಸಲಾಗಿದೆ ಎಂದು ಕೆಎಸ್ಆರ್​ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕ್ರಮದಿಂದಾಗಿ ನಿಗಮದ ಚಾಲಕರು ರಾತ್ರಿ ವಾಹನಗಳನ್ನು ನಿಲ್ಲಿಸಿದ ಹೋಟೆಲ್ ಇತ್ಯಾದಿ ಸ್ಥಳಗಳಿಂದ ಟೀ/ಕಾಫಿಯನ್ನು ಫ್ಲಾಸ್ಕ್​ನಲ್ಲಿ ಸಂಗ್ರಹಿಸಿಕೊಳ್ಳಬಹುದು. ಬಳಿಕ ಅದನ್ನು ಸೇವಿಸುತ್ತಾ ಸುರಕ್ಷಿತವಾಗಿ ಚಾಲನೆ ಮಾಡಿ, ಪ್ರಯಾಣಿಕರನ್ನು ಅವರವರ ಗಮ್ಯ ಸ್ಥಳಕ್ಕೆ ತಲುಪಿಸಬೇಕಿರುವುದು ನಮ್ಮ ಜವಾಬ್ದಾರಿ. ಇದನ್ನು ನಿರ್ವಹಿಸುವಲ್ಲಿ ಸಾರಿಗೆ ನಿಗಮ ಸದಾ ಬದ್ಧವಾಗಿದೆ ಎಂದು ಕೆಎಸ್​ಆರ್​ಟಿಸಿ ತನ್ನ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಅಭಯ ನೀಡಿದೆ.

error: Content is protected !!