ದೆಹಲಿ: ಆಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪಿಸುವ ಜನವರಿ 22ರಂದು ದೇಶದ ಪ್ರತಿಯೊಂದು ಮನೆ ಮನೆಗಳಲ್ಲಿ ‘ಶ್ರೀರಾಮ ಜ್ಯೋತಿ’ಯನ್ನು ಬೆಳಗಿಸಿ. ದೇಶಾದ್ಯಂತ ಅಂದು ದೀಪಾವಳಿ ಹಬ್ಬದಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
22ನೇ ತಾರೀಕಿಗೆ ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ಆ ಅದೃಷ್ಟ ನಮಗೆ ಒಲಿದು ಬಂದಿದೆ. ದೇಶಕ್ಕಾಗಿ ಹೊಸ ಸಂಕಲ್ಪವನ್ನು ಮಾಡಬೇಕಿದೆ. ದೇಶದ 140 ಕೋಟಿ ಜನರು ಅಂದು ಮನೆಗಳಲ್ಲಿ ಶ್ರೀರಾಮದೀಪವನ್ನು ಬೆಳಗಿಸಿ, ದಿವ್ಯಜ್ಯೋತಿಯ ಬೆಳಕು ಮನೆಮನಗಳಲ್ಲಿ ಬೆಳಗಿಸಿ ಎಂದರು.ಅಯೋಧ್ಯೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಇದಕ್ಕೂ ಮೊದಲು ಅವರು, ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ, ನವೀಕರಿಸಲಾದ ಅಯೋಧ್ಯೆ ಧಾಮ ರೈಲ್ವೆ ನಿಲ್ದಾಣ ಉದ್ಘಾಟಿಸಿ, 2 ಅಮೃತ್ ಭಾರತ್ ರೈಲುಗಳು ಮತ್ತು 6 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಜೊತೆಗೆ 15,700 ಕೋಟಿ ರೂ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದರು.