ಬೆಳ್ತಂಗಡಿ : ಕಪುಚಿನ್ ಸೇವಾ ಕೇಂದ್ರ ಇದರ ಅಂಗ ಸಂಸ್ಥೆಯಾದ ವಿಮುಕ್ತಿ ಲಾಯಿಲ ಇದರ ವತಿಯಿಂದ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಜೊತೆ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ನಿರ್ದೇಶಕ ವಿನೋದ್ ಮಸ್ಕರೇನಸ್ , ‘ ಕ್ರಿಸ್ ಮಸ್ ಇಡೀ ಮಾನವ ಕುಲಕ್ಕೆ ಮನುಷ್ಯತ್ವದ ಅರ್ಥ ನೀಡುವ ಹಬ್ಬ. ಮನುಷ್ಯತ್ವ ಇಲ್ಲದೇ ಹೋದರೆ ಜೀವನವೇ ಶೂನ್ಯ. ಹಾಗಾಗಿ ಸಕಲ ಜೀವರಾಶಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾನವ ಕುಲದಲ್ಲಿ ಮನುಷ್ಯತ್ವ ಬೆಳೆಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.
‘ಏಸು ಕ್ರಿಸ್ತ ಮಾಡಿದ ಕೆಲಸ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿ. ಅಗಾಧವಾದ ಪ್ರೀತಿ, ಮಮತೆ, ಸಹನೆ, ತಾಳ್ಮೆ ಏಸುವಿನದ್ದು. ಆತನ ಆದರ್ಶವನ್ನು ಪಾಲಿಸುವ ಎಲ್ಲರೂ ತನ್ನ ಬದುಕಿನಲ್ಲಿ ಸೇವೆಗೆ ಪ್ರಾಮುಖ್ಯತೆ ನೀಡಿದ್ದಾರೆ’ ಎಂದು ಅವರು ಹೇಳಿದರು.
ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಏಣಿಂಜೆ ಮಾತನಾಡಿ, ‘ಕಪುಚಿನ್ ಸೇವಾ ಸಂಸ್ಥೆಯ ಸೇವಾ ಕಾರ್ಯಗಳು ದೇವರು ಮೆಚ್ಚುವ ಕಾರ್ಯಗಳಗಿದ್ದು ಮಾನವ ಕುಲಕ್ಕೆ ಮಾದರಿಯಾಗಿದೆ. ಎಲ್ಲರಿಗೂ ಉತ್ತಮ ಬದುಕು ನೀಡಿ ಸಮರ್ಥ ಸಮಾಜ ನಿರ್ಮಿಸುವಲ್ಲಿ ಅವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯವಾದುದು’ ಎಂದರು.
ಕಪುಚಿನ್ ಸಂಸ್ಥೆಯ ಸಹ ನಿರ್ದೇಶಕ ರೋಹನ್ ಲೋಬೋ, ಸಿಬ್ಬಂದಿ ಅಶೋಕ್ ಇದ್ದರು.
ಸಿಬ್ಬಂದಿಗಳಾದ ರೋಹಿಣಿ ಕಾರ್ಯಕ್ರಮ ನಿರೂಪಿಸಿ, ಸವಿತಾ ವಂದಿಸಿದರು