ವಕೀಲ ಸಮುದಾಯದ ಬಹುನಿರೀಕ್ಷಿತ ‘ವಕೀಲರ ಸಂರಕ್ಷಣಾ ವಿಧೇಯಕ’ ಮಂಡನೆ: ನ್ಯಾಯವಾದಿಗಳ ಮೇಲಿನ ಹಲ್ಲೆಗೆ 3 ವರ್ಷ ಜೈಲು ಶಿಕ್ಷೆ, ಲಕ್ಷ ದಂಡ..!: ವಿಧೇಯಕವನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್ ಕೆ ಪಾಟೀಲ್

ಬೆಂಗಳೂರು: ಹಲವು ವರ್ಷಗಳಿಂದ ವಕೀಲರ ರಕ್ಷಣೆಗೆ ಕಾಯಿದೆ ರಚನೆ ಮಾಡಬೇಕು ಎಂಬ ಹೋರಾಟ ನಡೆಯುತ್ತಿದ್ದು ಈ ಹೋರಟಕ್ಕೆ ಡಿ.11ರಂದು ಜಯಸಿಕ್ಕಿದೆ.

ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ 10ನೇ ರಾಜ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಕೀಲರ ಸಂರಕ್ಷಣಾ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯ ಸರ್ಕಾರ ವಕೀಲ ಸಮುದಾಯದ ಬಹುನಿರೀಕ್ಷಿತ ವಕೀಲರ ಸಂರಕ್ಷಣಾ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್ ಕೆ ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

 

ವಿಧೇಯಕದ ಉದ್ದೇಶ :

ವಕೀಲರು ತಮ್ಮ ವೃತ್ತೀಯ ಕರ್ತವ್ಯಗಳ ಯುಕ್ತ ನಿರ್ವಹಣೆಯಲ್ಲಿ ತಮ್ಮ ಕರ್ತವ್ಯಗಳ ನಿರ್ವಹಣೆಯನ್ನು ಅಡ್ಡಿಪಡಿಸುವ ಅಂದರೆ ನ್ಯಾಯ ದೊರಕಿಸಿಕೊಡುವಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿರುವವರಿಂದ ಕಿರುಕುಳಕಾರಿ ಅಥವಾ ತೊಂದರೆ ಕೃತ್ಯಗಳಿಂದ ರಕ್ಷಣೆ.

ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು ಮತ್ತು ನೈತಿಕತೆಗಳ ಅನುಸಾರವಾಗಿ ತೆಗೆದುಕೊಂಡ ಯಾವುದೇ ಕ್ರಮಕ್ಕಾಗಿ ಅಭಿಯೋಜನೆ ಅಥವಾ ಆಡಳಿತಾತ್ಮಕ, ಆರ್ಥಿಕ ಅಥವಾ ಇತರ ನಿಬರ್ಂಧಗಳನ್ನು ಅನುಭವಿಸುವಂತಿಲ್ಲ ಅಥವಾ ಭಯಪಡತಕ್ಕದ್ದಲ್ಲ ಎಂಬುದನ್ನು ಸರ್ಕಾರಗಳು ಖಚಿತಪಡಿಸಬೇಕು.

ವಕೀಲರು ತಮ್ಮ ಪ್ರಕಾರ್ಯಗಳ ನಿರ್ವಹಣೆ ಮಾಡುವಲ್ಲಿ ಅವರ ಭದ್ರತೆಗೆ ಬೆದರಿಕೆ ಒಡ್ಡಿದಾಗ ಪ್ರಾಧಿಕಾರಗಳು ಅವರನ್ನು ಸಂಪೂರ್ಣವಾಗಿ ಸಂರಕ್ಷಿಸಬೇಕು.

ವಕೀಲರು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೇ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಿಗಾಗಿ ಅವರ ಮೇಲಿನ ಹಿಂಸೆ ನಿಷೇಧಿಸುವುದು ಮತ್ತು ರಕ್ಷಣೆ ನೀಡುವುದು.

 

ವಕೀಲರ ಮೇಲಿನ ಹಲ್ಲೆಗೆ ಶಿಕ್ಷೆ

ಹಲ್ಲೆ ಮಾಡಿದ ವ್ಯಕ್ತಿಗೆ 6 ತಿಂಗಳಿಂದ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ.

ಪೊಲೀಸರು ಯಾವೊಬ್ಬ ವಕೀಲರನ್ನು ಬಂಧಿಸಿದರೆ 24 ಗಂಟೆಯೊಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು.

ಬೆದರಿಕೆ, ಕೆಲಸಕ್ಕೆ ಅಡ್ಡಿ, ಕಿರುಕುಳ ನೀಡಿದರೆ ಶಿಕ್ಷೆ ಇದೆ. ದೇಶ- ವಿದೇಶದಲ್ಲಿ ಮುಕ್ತವಾಗಿ ಪ್ರಯಾಣಿಸಲು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

 

ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ವಕೀಲರ ಸಂಘ ಮನವಿ ಮಾಡಿತ್ತು. ಈ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

error: Content is protected !!