ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶನಂದನ್ ಎಮ್. ಡಿ.08ರಂದು ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಮಳಿಗೆಗಳಿಗೆ ಭೇಟಿ ವಸ್ತುಪ್ರದರ್ಶನದಲ್ಲಿ ನೋಡಲು, ತಿಳಿಯಲು ಮತ್ತು ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಸಾಕಷ್ಟು ಅವಕಾಶಗಳಿವೆ. ಜೊತೆಗೆ ಮನೋರಂಜನೆಯೂ ಇದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು. ಬ್ಯಾಂಕ್‌ಗಳು, ಜೀವವಿಮೆ, ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಸೆಲ್ಕೋ ಸೋಲಾರ್, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಪುಸ್ತಕದ ಮಳಿಗೆಗಳು, ರುಡ್‌ಸೆಟ್ ಬಜಾರ್, ಮಿಲೆಟ್ ಸೇರಿದಂತೆ ಇನ್ನೂರಕ್ಕೂ ಮಿಕ್ಕಿ ಮಳಿಗೆಗಳಿವೆ. ಸಿರಿಧಾನ್ಯಗಳ ಬಳಕೆಯಿಂದ ಪೌಷ್ಠಿಕ ಆಹಾರ ತಯಾರಿ ವಿಧಾನವನ್ನು ಮೊದಲು ಆರಂಭಿಸಿದ್ದು ಮಿಲೆಟ್ ಭೇಟಿ ನೀಡಿ ಎಲ್ಲರೂ ಮನೆಯಲ್ಲಿಯೂ ಸಿರಿಧಾನ್ಯಗಳ ಆಹಾರ ಬಳಸಿ ಎಂದು ಕಿವಿಮಾತು ಹೇಳಿದರು.
ಶ್ರದ್ಧಾ ಅಮಿತ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಸಿ.ಒ.ಒ. ಅನಿಲ್ ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ಸತೀಶ್ಚಂದ್ರ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಮೊದಲಾದವರು ಇದ್ದರು.
ರಾತ್ರಿ ಗಂಟೆ 10.30 ರ ವರೆಗೆ ವಸ್ತುಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶವಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ದೇವಸ್ಥಾನ, ಬೀಡು, ಪ್ರವೇಶದ್ವಾರ, ವಸತಿಗೃಹಗಳು, ಮಂಜೂಷಾ ವಸ್ತುಸಂಗ್ರಹಾಲಯ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.