ಶಿರ್ಲಾಲು: 25 ನೇ ವರ್ಷದ ಗುರುಪೂಜಾ ಕಾರ್ಯಕ್ರಮ: ‘ಹಿಂದುಳಿದ ಸಮಾಜ ಸ್ವಾಭಿಮಾನ ಬೆಳೆಸಿಕೊಳ್ಳಬೇಕು’ : ರಾಜೀವ ಸಾಲಿಯಾನ್

ಬೆಳ್ತಂಗಡಿ : ‘ನಾರಾಯಣ ಗುರುಗಳು ಕಷ್ಟದ ದಿನಗಳಲ್ಲಿ ಶೋಷಿತರ ಪರವಾಗಿ ನಿಂತ ಕಾರಣ ಇಂದು ಹಿಂದುಳಿದ ಸಮಾಜ ತಲೆ ಎತ್ತಿ ಬದುಕವಂತಾಗಿದೆ. ನಾರಾಯಣ ಗುರುಗಳ ವಿಚಾರಧಾರೆಯನ್ನು ಅನುಸರಿಸುತ್ತಾ ಬಂದಿರುವ ಜಾತಿ ಸಂಘಟನೆಗಳು ಯಾವುದೇ ಜಾತಿ ಅಥವಾ ಸಮಾಜದ ವಿರುದ್ಧವಾಗಿರದೆ ಕಷ್ಟಕ್ಕೆ ಸ್ಪಂಧಿಸುವ ಕೆಲಸವನ್ನು ಮಾಡುತ್ತಾ ಬಂದಿದೆ’ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಜೊತೆ ಕಾರ್ಯದರ್ಶಿ ರಾಜೀವ ಸಾಲಿಯಾನ್ ಹೇಳಿದರು.

ಅವರು ಭಾನುವಾರ ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ಶಿರ್ಲಾಲು ಕರಂಬಾರು ಗ್ರಾಮಗಳನ್ನೊಳಗೊಂಡ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ, ಯುವವಾಹಿನಿ ಸಂಚಲನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ 169 ನೇ ಗುರು ಜಯಂತಿ ಅಂಗವಾಗಿ ಸ್ಥಳೀಯ ಸಂಘದ 25ನೇ ವರ್ಷದ ಗುರುಪೂಜೆಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ನಮ್ಮ ಮಕ್ಕಳನ್ನು ವಿದ್ಯೆ ಬುದ್ದಿ ಸಂಸ್ಕಾರ ನೀಡಿ ಸಮಾಜದ ಆಸ್ತಿಯಾಗಿಸಬೇಕು. ಅಸ್ಪೃಶ್ಯತೆ ಇರುವ ಕಡೆ ನಾವು ಹೋಗದೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಮಾಡಿದ ಬಗ್ಗೆ, ನಾರಾಯಣ ಗುರುಗಳಿಗೆ ಸಂಬAಧಿಸಿದ ಪಠ್ಯ ವಿಚಾರ ಕೈ ಬಿಟ್ಟಾಗ ನಾರಾಯಣ ಗುರುಗಳನ್ನು ಆರಾಧಿಸುವ ಸಮಾಜದ ಎಲ್ಲರೂ ಸರ್ಕಾರಗಳ ಆ ನಿಲುವುಗಳನ್ನು ಒಗ್ಗಟ್ಟಾಗಿ ವಿರೋಧಿಸುವ ಕೆಲಸ ಮಾಡದೆ ಹೋದುದು ದುರದೃಷ್ಟಕರ’ ಎಂದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವತ್ಥ್ ಕುಮಾರ್ ಮಾತನಾಡಿ, ‘ನಾರಾಯಣ ಗುರುಗಳು ಧಮನಿತ ಸಮಾಜದ ಸಂತರಾಗಿದ್ದಾರೆ. ನಮ್ಮೊಳಗಿನ ಮೂಢನಂಬಿಕೆಯನ್ನು ತೊಲಗಿಸಲು ಪ್ರಯತ್ನಸಿದವರು. ಅಂತಹ ನಾರಾಯಣ ಗುರುಗಳ ಸಂದೇಶವನ್ನೇ ಇಟ್ಟುಕೊಂಡು ತಾನು ದುಡಿದ ಪಾಲಿನಲ್ಲಿ ಸಂಘಕ್ಕಾಗಿ ಧಾರೆಯೆರದು ಸಮಾಜಕ್ಕೆ ಸ್ಪಂದಿಸುವ ಸ್ಥಳೀಯ ಸಂಘದ ಸದಸ್ಯರ ಕಾರ್ಯ ಶ್ಲಾಘನೀಯವಾದುದು. ಸಂಘಟನೆ ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ ಏಕ ರಾಶಿಯಾಗಿರಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ಶಿರ್ಲಾಲಿನ ಸಂಘವಾಗಿದೆ’ ಎಂದರು.

ಶಿರ್ಲಾಲು – ಕರಂಬಾರು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಪಾಲನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಮಾಜದ ಬೇರೆ ಬೇರೆ ಸಂಘಟನೆಗಳ ಮೂಲಕ ಸಿಗುವ ಬೇರೆ ಬೇರೆ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಆಸಕ್ತಿಯನ್ನು ಬೆಳೆಸಬೇಕು. ಈಗಾಗಲೇ ಸಂಘಕ್ಕೆ ಸ್ವಂತ ನಿವೇಶನ ಮಾಡುವ ನೆಲೆಯಲ್ಲಿ ಧನ ಸಹಾಯವನ್ನು ಸಂಗ್ರಹಿಸಿ ಜಾಗವನ್ನು ಖರೀದಿ ಮಾಡುವ ಪ್ರಕ್ರಿಯೆ ನಡೆದಿದೆ. ಸಂಘದ ನೋಂದಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅದು ಮುಗಿದ ಬಳಿಕ ಸಂಘದ ಮಹಾಸಭೆ ನಡೆಯಲಿದೆ’ ಎಂದರು.

ವೇದಿಕೆಯಲ್ಲಿ ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಪುದ್ದರಬೈಲು, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಜಯಕುಮಾರ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಕುಶಲ ರಮೇಶ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ ಉಪಸ್ಥಿತರಿದ್ದರು.

ಸಂಘಕ್ಕೆ ಕಡಿಮೆ ಬೆಲೆಗೆ ನಿವೇಶನ ನೀಡಿದ ರಾಜಮ್ಮ, ಶ್ರೀ ಗುರುದೇವ ಸಹಕಾರಿ ಸಂಘ ಹಿರಿಯಡ್ಕ ಶಾಖೆಯ ಶಾಖಾ ಪ್ರಬಂಧಕರಾಗಿ ಆಯ್ಕೆಯಾದ ರಂಜಿತ್ ಇವರನ್ನು ಗೌರವಿಸಲಾಯಿತು. ಶೇಖರ ಪೂಜಾರಿ ಕಲ್ಲಾಜೆ, ಶ್ರೀಧರ ಪೂಜಾರಿ ಕರ್ದೊಟ್ಟು, ರಮಾನಂದ ಸಾಲಿಯಾನ್ ಪಾದೆ ಇವರ ಸ್ಮರಣಾರ್ಥ ದತ್ತಿ ನಿಧಿಯನ್ನು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಅಗಲಿದ ಗ್ರಾಮದ ಸ್ವಜಾತಿ ಬಾಂಧವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಿರಂಜನ ಶಾಂತಿ ಮತ್ತು ತಂಡ ಗುರುಪೂಜೆ ನೆರವೇರಿಸಿದರು.

ಶ್ರೇಯ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಸಂಘದ ನಿರ್ದೇಶಕ ಪ್ರತಾಪ್ ಕಲ್ಲಾಜೆ ಸ್ವಾಗತಿಸಿದರು .ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ಜ್ಞಾನೇಶ್ ಕಟ್ಟ ವಾರ್ಷಿಕ ವರದಿ ವಾಚಿಸಿದರು. ಯತೀಶ್ ಕರಂಬಾರು ವಂದಿಸಿ, ರಂಜಿತ್ ಅಜಿರೋಲಿ ಹಾಗೂ ವಿಜಯ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.

error: Content is protected !!