ತಪ್ಪು ಮಾಡದೆ ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳು ಸೆರೆಮನೆ ವಾಸ: ತಾಯ್ನಾಡಿನವರ ಸಹಾಯದಿಂದ ಊರಿಗೆ ಮರಳಿದ ಕಡಬದ ಯುವಕ: ಮಗನನ್ನು ಆಲಂಗಿಸಿ ಕಣ್ಣೀರಿಟ್ಟ ತಾಯಿ

ಕಡಬ: ಐತೂರಿನ ನಿವಾಸಿ ಚಂದ್ರಶೇಖರ್ 2022ರಲ್ಲಿ ಬೆಂಗಳೂರಿನಲ್ಲಿದ್ದ ಕೆಲಸದಿಂದ ಬಡ್ತಿ ಪಡೆದು ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ ಎಂಬ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೆ ಅದೊಂದು ದಿನ ಏಕಾಏಕಿ ಚಂದ್ರಶೇಖರ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಅಲ್ಲಿಂದ 11 ತಿಂಗಳ ಕಾಲ ಸೆರೆಮನೆ ವಾಸ ಮಾಡಿದ ಚಂದ್ರಶೇಖರ್ ಈಗ ಬಿಡುಗಡೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.

2022 ನವೆಂಬರ್‌ನಲ್ಲಿ ಅವರು ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ರಿಯಾದ್‌ನ ಅಂಗಡಿಗೆ ತೆರಳಿ, ಸಹಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು ಎರಡು ಬಾರಿ ನೀಡಿದ್ದರು. ನಂತರ ಮೊಬೈಲ್‌ಗೆ ಬಂದ ಕರೆಯೊಂದಕ್ಕೆ, ಹೊಸ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಜೊತೆಗೆ ಒಟಿಪಿಯನ್ನೂ ಹೇಳಿದ್ದರು. ಆ ವೇಳೆ ಚಂದ್ರಶೇಖರ್ ಅವರ ಖಾತೆ ಹ್ಯಾಕ್ ಆಗಿತ್ತು. ಬಳಿಕ ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರೂ. ಹಣ ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿ ಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಇದಾದ ಒಂದು ವಾರದಲ್ಲಿ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೇ ಚಂದ್ರಶೇಖರ್ ಅವರಿಗೆ ಇದು ಅರಿವಿಗೆ ಬಂದಿತ್ತು. ಆದರೂ ವಾದವನ್ನು ಪರಿಗಣಿಸದ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು. ಈ ವಿಚಾರ ಮಾದ್ಯಮದಲ್ಲಿ ಪ್ರಸಾರವಾದ ಕೂಡಲೆ ಸೌದಿ ಅರೇಬಿಯಾದಲ್ಲಿರುವ ಮಂಗಳೂರಿನವರು ಚಂದ್ರಶೇಖರ್ ಅವರ ಬಿಡುಗಡೆಗೆ ನೆರವಾಗಿದ್ದಾರೆ. ಹೀಗಾಗಿ ನ.20ರಂದು ರಾತ್ರಿ ಅವರು ವಿಮಾನದಲ್ಲಿ ಸೌದಿಯ ರಿಯಾದ್‌ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್ ಸೇರಿದಂತೆ ಹಲವರು ಅವರನ್ನು ಸ್ವಾಗತಿಸಿದರು. ತಾಯಿ ಸಂತೋಷದಿAದ ಮಗನನ್ನು ಆಲಂಗಿಸಿ ಬರಮಾಡಿಕೊಂಡು ಕಣ್ಣೀಟ್ಟಿದ್ದಾರೆ.

ಜೈಲು ಅನುಭವ ಹಂಚಿಕೊಂಡ ಚಂದ್ರಶೇಖರ್ ‘ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು. ಗೆಳೆಯರು ಮನೆಯವರು ಸೇರಿದಂತೆ ಯಾರ ಹತ್ತಿರವೂ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ನನಗೆ ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಸೆರೆಮನೆ ವಾಸ ಅನುಭವಿಸಿದೆ . ಇದೀಗ ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ. ಮುಂದೆ ನನಗೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ. ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ.

error: Content is protected !!