ಪುತ್ತೂರು: ದುಷ್ಕರ್ಮಿಗಳ ತಂಡವೊಂದು ಕಲ್ಲೇಗ ಟೈಗರ್ಸ್ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್ ಕಲ್ಲೇಗ (26)ರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಘಟನೆ ನ.06ರಂದು ತಡರಾತ್ರಿ ನಡೆದಿದೆ.
ಹತ್ಯೆಗೈದ ನಾಲ್ವರಿದ್ದ ತಂಡದಲ್ಲಿ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಒಬ್ಬ ಆರೋಪಿಯನ್ನು ಪೊಲಿಸರು ಸೆರೆಹಿಡಿದಿದ್ದು, ಇನ್ನೋರ್ವ ಪೊಲೀಸರಿಗೆ ಶರಣಾಗುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಗಳನ್ನು ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್ ಮಣಿಯಾಣಿ ಹಾಗೂ ಇನ್ನೊರ್ವ ಶಂಕಿತ ಕೇಶವ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ನ.06ರಂದು ಸಂಜೆ ನೆಹರೂ ನಗರ ಸಮೀಪ ಅಕ್ಷಯ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾದ ವ್ಯಕ್ತಿಯೊಬ್ಬರಿಗೆ ಆರೋಪಿ ಚೇತನ್ ಸ್ನೇಹಿತನ ಬೈಕ್ ಡಿಕ್ಕಿ ಹೊಡೆದಿತ್ತು. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ ಅಕ್ಷಯ್ ಕಲ್ಲೇಗ ಬಳಿಕ ಚಿಕಿತ್ಸಾ ವೆಚ್ಚ 2000 ರೂ ಪಾವತಿಸುವಂತೆ ಬೈಕ್ ಸವಾರನಿಗೆ ತಿಳಿಸಿದ್ದರು. ಆದರೆ ಅಷ್ಟು ನೀಡಲಾಗುವುದಿಲ್ಲ ಕೇಸಿನಲ್ಲಿ ನೋಡಿಕೊಳ್ಳುವ ಎಂದು ಆರೋಪಿ ಚೇತನ್ ಹೇಳಿದ್ದ ಎನ್ನಲಾಗಿದೆ. ಬಳಿಕ ಇದೇ ವಿಚಾರವಾಗಿ ರಾತ್ರಿ ಸುಮಾರು 11:30ರ ವೇಳೆಗೆ ಅಕ್ಷಯ್‌ಯನ್ನು ನೆಹರೂ ನಗರಕ್ಕೆ ಬರಲು ತಿಳಿಸಿದ ಚೇತನ್ ಮತ್ತು ತಂಡ, ಅಕ್ಷಯ್ ಬೈಕಿನಲ್ಲಿ ಬರುತ್ತಿದ್ದಂತೆ ಮಾರಕಾಸ್ತçದಿಂದ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳ ದಾಳಿಯಿಂದ ತಪ್ಪಿಕೊಳ್ಳಲು ಯತ್ನಿಸಿದರೂ ಅಕ್ಷಯ್ ಅವರ ಕಾಲು, ಕೈ ಹಾಗೂ ಕುತ್ತಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಅಕ್ಷಯ್ ಜೊತೆಗಿದ್ದ ಇನ್ನಿಬ್ಬರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಒಬ್ಬ ಕಲ್ಲೇಗ ಟೈಗರ್ಸ್ ತಂಡದ ಜೊತೆ ಸಕ್ರೀಯ ಒಡನಾಟ ಹೊಂದಿದ್ದ ಎಂದು ಹೇಳಲಾಗುತ್ತಿದ್ದು ಮತ್ತೊರ್ವ ಇತ್ತೀಚೆಗೆ ಬೇರ್ಪಟ್ಟಿದ್ದ ಎನ್ನಲಾಗುತ್ತಿದೆ. ಸದ್ಯ ಘಟನೆಯ ಸುತ್ತ ಸಾಕಷ್ಟು ಅನುಮಾನಗಳು ಸೃಷ್ಠಿಯಾಗಿವೆ.