ಚಿಕ್ಕಬಳ್ಳಾಪುರ: ಝಿಕಾ ವೈರಸ್ ಪತ್ತೆ..!: ಔಷಧವಿಲ್ಲದ ರೋಗಕ್ಕೆ ಮಾರ್ಗಸೂಚಿ ಸಿದ್ಧಪಡಿಸುತ್ತಿರುವ ಆರೋಗ್ಯ ಇಲಾಖೆ: ನಿರ್ಲಕ್ಷಿಸಿದರೆ ಗರ್ಭಿಣಿ ಮಹಿಳೆಯರಿಗೆ ಆಪತ್ತು..!

ಚಿಕ್ಕಬಳ್ಳಾಪುರ: ಸೊಳ್ಳೆಗಳಿಂದ ಹರಡುವ ಝಿಕಾ ವೈರಸ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು  ಸಿದ್ಧಪಡಿಸುತ್ತಿದೆ.

ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳನ್ನು ಆರೋಗ್ಯ ಇಲಾಖೆಯು ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಆಗ ಅಲ್ಲಿನ ಸೊಳ್ಳೆಗಳಲ್ಲಿ ಝಿಕಾ ವೈರಸ್ ಕಂಡುಬಂದಿದೆ. ಈಗಾಗಲೇ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದ್ದು, ಈವರೆಗೆ ಮನುಷ್ಯರಲ್ಲಿ ಈ ರೋಗದ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮ ಸೇರಿದಂತೆ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದ್ದು, ಮುಖ್ಯವಾಗಿ, ಗರ್ಭಿಣಿಯರು ಸೇರಿದಂತೆ ಇತರರ ಮೇಲೆ ಹೆಚ್ಚು ನಿಗಾ ವಹಿಸುತ್ತಿದೆ.

ಈ ವೈರಸ್ ಭ್ರೂಣದ ಮೇಲೆ ಹೆಚ್ಚಿನ ಅಪಾಯ ಉಂಟುಮಾಡುತ್ತದೆ. ವೈರಸ್ ಮೊದಲು ಮಗುವನ್ನು ಬಾಧಿಸುತ್ತದೆ. ಈ ವೈರಸ್ ಭ್ರೂಣಗಳ ಮೆದುಳಿಗೆ ಕ್ರಮಿಸಿ ಮೈಕ್ರೋ ಸೆಫಾಲಿ ಎಂಬ ಗಂಭೀರ ಜನ್ಮದೋಷಕ್ಕೂ ಕಾರಣವಾಗಬಹುದು. ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕ್ಷೀಣಿಸಿ, ಆಟಿಸಂನಂಥ ರೋಗದೊಂದಿಗೆ ಜನಿಸುವ ಸಾಧ್ಯತೆ ಹೆಚ್ಚು. ಶ್ರವಣ ಹಾಗೂ ದೃಷ್ಟಿ ದೋಷ, ಕೀಲುಗಳಲ್ಲಿ ಚಲನೆ ಇಲ್ಲದಿರುವುದು, ನರ ಬೆಳವಣಿಗೆಯಲ್ಲಿ ವೈಪರೀತ್ಯ ಸೇರಿದಂತೆ ಹಲವು ರೀತಿಯ ರೋಗಗಳಿಗೂ ಇದು ಕಾರಣವಾಗಬಹುದು. ಗರ್ಭಿಣಿಯಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇದ್ದರಂತೂ ಶಿಶುವಿನ ಪ್ರಾಣಕ್ಕೂ ಕುತ್ತು ಬರಬಹುದು.

ಝಿಕಾ ವೈರಸ್ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಇದಕ್ಕೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲದಿರುವ ಕಾರಣ ಹೆಚ್ಚು ಎಚ್ಚರ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆ ನಿವಾರಕ ಕ್ರೀಮ್‌ಗಳ ಬಳಕೆ, ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ವೈರಸ್ ನ್ನು ತಡೆಗಟ್ಟಬಹುದು.

error: Content is protected !!