ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಪುಣ್ಯ ಕ್ಷೇತ್ರ ಧರ್ಮಸ್ಥಳ:,ಡಿ. ವೀರೇಂದ್ರ ಹೆಗ್ಗಡೆ: ಧರ್ಮಸಂರಕ್ಷಣಾ ಪಾದಯಾತ್ರೆ,:ಧರ್ಮಸ್ಥಳಕ್ಕೆ ಹರಿದು ಬಂದ ಜನಸಾಗರ:

 

 

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬಸದಿಯಲ್ಲಿರುವ ಮೂಲ ಸ್ವಾಮಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ದೇವಸ್ಥಾನದಲ್ಲಿ ಮುಖ್ಯ ಆರಾಧ್ಯ ದೇವರಾದ ಶ್ರೀ ಮಂಜುನಾಥ ಸ್ವಾಮಿ ಶಾಂತಿ, ತಾಳ್ಮೆಯ ಸಾಕಾರ ಮೂರ್ತಿಗಳಾಗಿದ್ದು, ಇಲ್ಲಿ ಯಾವಾಗಲೂ ಶಾಂತಿ, ನೆಮ್ಮದಿ, ಸಾಮರಸ್ಯ ನೆಲೆಸಿರುತ್ತದೆ. ಸದಾ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ. ತಾನು ಮತ್ತು ಕುಟುಂಬದವರು ಎಲ್ಲರೂ ಶಾಂತಚಿತ್ತರಾಗಿದ್ದೇವೆ. ಇಲ್ಲಿ ಶ್ರದ್ಧಾ-ಭಕ್ತಿಯಿಂದ ಬರುವ ಎಲ್ಲಾ ಭಕ್ತರಿಗೂ ಶಾಂತಿ, ನೆಮ್ಮದಿ, ತಾಳ್ಮೆ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳಕ್ಕೆ ಉಭಯ ಧರ್ಮಸಂರಕ್ಷಣ ರಥಗಳು ಭವ್ಯ ಮೆರವಣಿಗೆಯಲ್ಲಿ ಬಂದಾಗ ಹಾಗೂ ಉಜಿರೆಯಿಂದ ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಬಂದ ಸಂದರ್ಭ ದೇವಸ್ಥಾನದ ಎದುರು ನಡೆದ ಸಮಾರಂಭದಲ್ಲಿ ಮಾತನಾಡಿದರು.

 

 

ಶ್ರೀ ಮಂಜುನಾಥ ಸ್ವಾಮಿ ವಿಷಕಂಠನಾಗಿದ್ದು ವಿಷವನ್ನು ಕಂಠದಲ್ಲಿಟ್ಟುಕೊಂಡು ಲೋಕಕಲ್ಯಾಣ ಮಾಡುವ ದೇವರು ದುಶ್ಟಶಕ್ತಿಗಳ ನಾಶಮಾಡಿ ದೇವತೆಗಳು ಶಿಷ್ಟರ ರಕ್ಷಣೆ ಮಾಡುತ್ತಾರೆ. ಧರ್ಮಸ್ಥಳದ ಅಭಿಮಾನಿ ಭಕ್ತರೆ ಸ್ವಯಂ-ಪ್ರೆರಣೆಯಿಂದ ಕ್ಷೇತ್ರದ ರಕ್ಷಣೆಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಮಾಡಿರುವ ಸೇವೆ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಒಂದು ದೇಶ ಹಾಳು ಮಾಡಬೇಕಾದರೆ ಅಲ್ಲಿನ ಧರ್ಮ, ಸಂಸ್ಕøತಿಗೆ ಹಾನಿ ಮಾಡಬೇಕಂತೆ. ಹಾಗೆ ಧರ್ಮಸ್ಥಳದ ಬಗ್ಗೆ ಸುಳ್ಳು ವದಂತಿಯೊಂದಿಗೆ ಅಪ್ರಚಾರ ಮಾಡಲಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಯಾವುದೇ ತನಿಖೆಗೂ ತಾನು ಸಿದ್ಧ ಎಂದು ಹೇಳಿದರು. ಆದರೆ ತಮ್ಮ ಮನ, ವಚನ, ಕಾಯ ಪವಿತ್ರವಾಗಿದೆ. ನಮ್ಮಲ್ಲಿ ಯಾವುದೇ ಸಂಶಯ, ಗೊಂದಲವಿಲ್ಲ. ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆ ಸನ್ನಿಧಿಯಲ್ಲಿ ಪ್ರತಿ ತಿಂಗಳು ಸಂಕ್ರಾಂತಿಯಂದು ತಾನು ವರದಿ ಒಪ್ಪಿಸಬೇಕು. ಅವರ ಅಭಯ, ಅನುಗ್ರಹ ತಾನು ಮಾಡುವ ಎಲ್ಲಾ ಸೇವಾಕಾರ್ಯಗಳಿಗೆ ಇದೆ ಎಂದು ಹೇಳಿದರು.
ಪ್ರಬಲ ಇಚ್ಛಾಶಕ್ತಿ, ನೈತಿಕ ಬಲ, ದೃಢ ಸಂಕಲ್ಪ ಹಾಗೂ ಭಕ್ತರು ಮತ್ತು ಅಭಿಮಾನಿಗಳ ಬೆಂಬಲದಿಂದ ನಮ್ಮ ಸೇವಾಕಾರ್ಯಗಳು ಮುಂದೆ ಇನ್ನಷ್ಟು ದುಪ್ಪಟ್ಟಾಗಲಿವೆ. ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವ ತನಗೆ ವಜ್ರಕವಚವಾಗಿ ರಕ್ಷಣೆ ನೀಡುತ್ತದೆ ಎಂದು ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಹೆಗ್ಗಡೆಯವರು ವೇದಿಕೆಯ ಮಧ್ಯದಲ್ಲಿರುವ ಧರ್ಮಪೀಠದಲ್ಲಿ ಆಸೀನರಾದರು. ಎಲ್ಲಾ ಸ್ವಾಮೀಜಿಯವರು ಹಣ್ಣು-ಹಂಪಲು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಅಭಿಮಂತ್ರಿಸಿದ ಮಂತ್ರಾಕ್ಷತೆ ಹಾಕಿ ಶುಭ ಹಾರೈಸಿದರು.
ಬಳಿಕ ಸಂಕಲ್ಪ ಪೀಠದಲ್ಲಿದ್ದ ಹರಿವಾಣವನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು.
ಬಳಿಕ ಸೇರಿದ ಸಭಾಸದರೆಲ್ಲರೂ ನಾವು ಸದಾ ಧರ್ಮದ ರಕ್ಷಣೆಗಾಗಿ ಧರ್ಮಸ್ಥಳದ ರಕ್ಷಣೆಗೆ ನಿಮ್ಮೊಂದಿಗಿದ್ದೇವೆ ಎಂದು ದೃಢಸಂಕಲ್ಪ ಮಾಡಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ, ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಸೇರಿದಂತೆ 15 ಮಂದಿ ಮಠಾಧೀಶರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸದ ನಳಿನ್‍ಕುಮಾರ್ ಕಟೀಲ್ ಮತ್ತು ಶಾಸಕ ಹರೀಶ್‍ಪೂಂಜ ಇದ್ದರು

ಗಮನಸೆಳೆದ ಪಾದಯಾತ್ರೆ

* ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಕೊಲ್ಲೂರಿನಿಂದ ಹೊರಟ ಧರ್ಮಸಂರಕ್ಷಣ ರಥ ಮತ್ತು ಮಂಗಳೂರಿನಿಂದ ಕದ್ರಿ ದೇವಸ್ಥಾನದಿಂದ ಹೊರಟ ಧರ್ಮಸಂರಕ್ಷಣ ರಥ ಆಗಮಿಸಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‍ಕೃಷ್ಣ ಪಡ್ವೆಟ್ನಾಯ, ಶಾಸಕ ಹರೀಶ್ ಪೂಂಜ, ಸಂಚಾಲಕ ಶಶಿಧರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಉಭಯ ರಥಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.

* ಕನ್ಯಾಡಿಯಲ್ಲಿ ಬದ್ರಿಯಾ ಮಸೀದಿ ಬಳಿ ಮುಸ್ಲಿಂ ಬಾಂಧವರು ಪಾದಯಾತ್ರಿಗಳಿಗೆ ಉಚಿತ ಪಾನೀಯ ವಿತರಿಸಿ ಮಾನವೀಯತೆ ಮೆರೆದರು.

*ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಉಜಿರೆಯಿಂದ ಧರ್ಮಸ್ಥಳಕ್ಕೆ “ಹರಹರ ಮಹಾದೇವ” ಎಂಬ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ಬಂದರು.

*ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಉಭಯ ರಥ ಮತ್ತು ಪಾದಯಾತ್ರಿಗಳನ್ನು ಸ್ವಾಗತಿಸಿದರು.

*ಎಲ್ಲರೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪವಿತ್ರ ಧರ್ಮಕ್ಷೇತ್ರಗಳ ಸಂರಕ್ಷಣೆಯ ದೃಢಸಂಕಲ್ಪ ಮಾಡಿದರು.

* ಮಳೆಯನ್ನೂ ಲೆಕ್ಕಿಸದೆ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

error: Content is protected !!