ಮೈಸೂರು: ಬೆನ್ನು ಹತ್ತಿದ್ದ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಪೋಲಿಸರ ಆಶ್ರಯ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡಿನಲ್ಲಿ ಇದ್ದಕ್ಕಿದ್ದಂತೆ ಸುಮಾರು 1.5 ವರ್ಷದ ಗಂಡು ಜಿಂಕೆಯೊಂದು ಪ್ರತ್ಯಕ್ಷವಾಗಿತ್ತು. ಈ ವೇಳೆ ತಾಲೂಕಿನ ಜನರು ಜಿಂಕೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ಆದರೆ ಜಿಂಕೆ ದಾರಿ ತಪ್ಪಿ ಬಂದಿದ್ದು ನಗರದ ಹಲವು ಬಡಾವಣೆಗಳಲ್ಲಿ ಸುತ್ತಾಡಿದೆ. ಜಿಂಕೆಯನ್ನು ಕಂಡ ಬೀದಿ ನಾಯಿಗಳು ನಗರದ ಸುತ್ತ ಬೆನ್ನಟ್ಟಿವೆ. ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಪಕ್ಕದಲ್ಲಿರುವ ಪೋಲಿಸ್ ಠಾಣೆಯ ಮುಂದಿರುವ ಬ್ಯಾರಿಕೇಡ್ ಮೇಲೆ ಜಿಂಕೆ ಹಾರಿ, ಠಾಣೆಯೊಳಗೆ ನುಗ್ಗಿದೆ.
ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ಜಿಂಕೆಯನ್ನು ನೋಡಿ ಪೊಲೀಸರು ಆಶ್ಚರ್ಯಗೊಂಡು, ಬಳಿಕ ರಕ್ಷಣೆಗೆ ಮುಂದಾಗಿದ್ದಾರೆ. ಬೀದಿ ನಾಯಿಗಳು ಜಿಂಕೆಯ ಕತ್ತಿನ ಭಾಗ ಸೇರಿ ಮೂರ್ನಾಲ್ಕು ಕಡೆ ಕಚ್ಚಿವೆ. ಪೊಲೀಸರು ಠಾಣೆಯ ಕೊಠಡಿಯಲ್ಲಿ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ, ರಕ್ತ ಸೋರುತ್ತಿದ್ದ ಜಾಗದಲ್ಲಿ ಅರಿಶಿಣದ ಪುಡಿಯನ್ನು ಹಚ್ಚಿ, ಬಳಿಕ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಮುಂದಿನ 7 ದಿನಗಳವರೆಗೆ ಜಿಂಕೆ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಲಾಗಿದೆ.