ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿ ಹಾಗೂ ಭ್ರಷ್ಟಾಚಾರದ ವಿಷಯದಲ್ಲಿ ಮಾಜಿ-ಹಾಲಿ ಶಾಸಕರ ನಡುವೆ ಪ್ರಮಾಣ ಸಮರ ಶುರುವಾಗಿದೆ. ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಶಾಸಕ ಹರೀಶ್ ಪೂಂಜರ ಮೇಲೆ ನಿರಂತರ ಭ್ರಷ್ಟಾಚಾರ, ದಂಧೆ, ಕಮಿಷನ್ ಆರೋಪ ಮಾಡಿ, ಜೊತೆಗೆ ನಾರಾವಿ- ಧರ್ಮಸ್ಥಳ ಬಸ್ ವಿಚಾರವಾಗಿ ನಡೆದ ರಾಜಕೀಯ ನಡೆ ಬಗ್ಗೆ ಶಾಸಕ ಹರೀಶ್ ಪೂಂಜರನ್ನು ಪ್ರಮಾಣಕ್ಕೆ ಕರೆದಿದ್ದರು. ಈ ಬಗ್ಗೆ ಇಂದು(ಆ.30) ಉಜಿರೆಯ ಓಷ್ಯನ್ ಪರ್ಲ್ ನಲ್ಲಿ ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ ಕರೆದು ಮಾದ್ಯಮದ ಮೂಲಕ ಪ್ರಮಾಣಕ್ಕೆ ನಾನು ಸಿದ್ಧ ಎಂದು ಬಹಿರಂಗಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಅವರು ಸುಳ್ಳಿನ ಗೋಪುರ ಕಟ್ಟಿ ಮಜಾ ರಾಜಕೀಯ ಮಾಡಿದ್ದಾರೆ. ಅಭಿವೃದ್ಧಿಗೆ ಅಡ್ಡಿ ಉಂಟು ಮಾಡುತ್ತಿರುವ ಮಾಜಿ ಶಾಸಕರು, ಜನರಿಗೆ ಬಸ್ಸಿನ ವ್ಯವಸ್ಥೆ ಮಾಡಿದ್ದನ್ನು ‘ನಾನೇ ನಿಲ್ಲಿಸಿದ್ದು’ ಎಂದು ಹೇಳಿ ದುರಾಹಂಕಾರ ತೋರಿಸಿದ್ದಾರೆ. ನಿಮ್ಮ ಅಧಿಕಾರವಧಿಯ ಅಭಿವೃದ್ಧಿ ಕಾರ್ಯಗಳು ಶಾಸಕರ ಭವನ ಹಾಗೂ ಬೆಳ್ತಂಗಡಿಯ ಹಳೆಯ ಐಬಿಯ ಕಂಬ, ಕಂಬಗಳಿಗೂ ಗೊತ್ತಿದೆ. ನಿಮ್ಮ ಸುಳ್ಳಿನ ರಾಜಕೀಯ ನಿಲ್ಲಿಸದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗೋದಿಲ್ಲ ಎಂದಿದ್ದಾರೆ.
‘ಆಣೆಪ್ರಮಾಣಕ್ಕೆ ಕರೆದಿದ್ದು ಬಾರೀ ಖುಷಿಯಾಯಿತು : ಇದನ್ನೇ ನಿರೀಕ್ಷೆ ಮಾಡುತ್ತಿದ್ದೆ’
ಕಳೆದ 5 ವರ್ಷದಲ್ಲಿ ನೀವು ನನ್ನ ಮೇಲೆ 40% ಕಮಿಷನ್, ಕಾಳಜಿ ಫ್ಲಡ್ ರಿಲೀಫ್ ಫಂಡ್ , 5 ಕೋಟಿಯ ಮನೆ, ಮರಳು, ಮರ ದಂಧೆ ಮಾಡಿದ್ದೇನೆ ಎಂದು ಆರೋಪಿಸಿದ್ದೀರಿ. ನಾನು ಈ ಎಲ್ಲಾ ಭ್ರಷ್ಟಾಚಾರಗಳನ್ನು ಮಾಡಿದ್ದೇನೆ ಅಂತ ದೈವ-ದೇವರ ಮುಂದೆ ನೀವು ಪ್ರಮಾಣ ಮಾಡಿ. ಇದೆಲ್ಲವನ್ನೂ ನಾನು ಮಾಡಿಲ್ಲ ಅಂತ ನಾನೂ ಪ್ರಮಾಣ ಮಾಡುತ್ತೇನೆ. ಆದರೆ ನೀವು ಪ್ರಮಾಣಕ್ಕೆ ಬರಬೇಕಾದರೆ ಒಂದನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ಬನ್ನಿ. ನಾನು ಪ್ರಮಾಣ ಮಾಡಿದ್ದಲ್ಲಿ ತಪ್ಪಿದ್ರೆ ದೇವರು ನನಗೆ, ನನ್ನ ಹೆಂಡತಿ, ಮಕ್ಕಳಿಗೆ ಶಿಕ್ಷೆ ನೀಡಲಿ ಎಂದು ತಯಾರಾಗಿಯೇ ಪ್ರಮಾಣ ಮಾಡುತ್ತೇನೆ. ನೀವು ಹೇಳಿದ್ದು ಸುಳ್ಳು ಅಂತ ದೇವರಿಗೆ ಗೊತ್ತಾದ್ರೆ ನಿಮಗೆ ,ನಿಮ್ಮ ಹೆಂಡತಿ-ಮಕ್ಕಳಿಗೆ, ನಿಮ್ಮ ಮೊಮ್ಮಕ್ಕಳಿಗೆ ಶಿಕ್ಷೆ ಆಗಲಿ ಅನ್ನೋದನ್ನು ನಿಮ್ಮ ಕುಟುಂಬದಲ್ಲಿ ಮಾತಾಡಿಕೊಂಡು ಬನ್ನಿ. ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಒಂದು ರೂಪಾಯಿ ತಗೊಂಡಿಲ್ಲ, ನನ್ನ ಕೈಯಲ್ಲಿದ್ದ ಹಣವನ್ನು ಕೊಟ್ಟಿದ್ದೇನೆ. ಈ ಬಗ್ಗೆಯೂ ಪ್ರಮಾಣ ನಡೆಯಲಿ ಎಂದರು.
ಕಾನೂನಾತ್ಮಕವಾಗಿ ತನಿಖೆಯಾಗಲಿ: ದೇವರ ಮುಂದೆ ಪ್ರಮಾಣ ನಡೆದರೆ ಸಾಲದು, ಕಾನೂನಾತ್ಮಕವಾಗಿಯೂ ತನಿಖೆಯಾಗಲಿ. ನಿಮ್ಮದೇ ರಾಜ್ಯ ಸರ್ಕಾರದ ಲೋಕಾಯುಕ್ತದಡಿ ತನಿಖೆ ನಡೆಯಲಿ. ನನ್ನ, ನನ್ನ ಹೆಂಡತಿ, ತಂದೆ, ತಾಯಿ ತಂಗಿ, ಬಾವನ ಆಸ್ತಿ-ಪಾಸ್ತಿಯ ತನಿಖೆಯಾಗಲಿ, ಕೇಂದ್ರದಿಂದ ಈಡಿ ತನಿಖೆಯೂ ಆಗಲಿ. ಇದೇ ಸಮಯದಲ್ಲಿ , ನಿಮ್ಮ ಹೆಂಡತಿ, ನಿಮ್ಮ ಮಕ್ಕಳ, ನಿಮ್ಮ ಅಳಿಯಂದಿರ ಆಸ್ತಿ-ಪಾಸ್ತಿ ಬಗ್ಗೆಯೂ ತನಿಖೆ ನಡೆಯಲಿ. ಈ ಮೂಲಕ ಭ್ರಷ್ಟಾಚಾರಿ ಯಾರು ಎಂದು ಸಮಾಜಕ್ಕೆ ಗೊತ್ತಾಗಲಿ. ಪ್ರಮಾಣದ ದಿನಾಂಕ, ಸಮಯ, ದೇವಸ್ಥಾನದ ಹೆಸರು ತಿಳಿಸಿ, ಲೋಕಾಯುಕ್ತ ಮತ್ತು ಈಡಿಗೆ ಯಾವಾಗ ತಿಳಿಸುತ್ತೀರಿ ಅಂತ ಹೇಳಿ. ನೀವು ಸುಳ್ಳಿನ ರಾಜಕೀಯ ನಿಲ್ಲಿಸಬೇಕು. ಇಲ್ಲದಿದ್ದರೆ, ತಾಲೂಕಿನ ಎಲ್ಲಾ ಜನರಿಗೆ ದ್ರೋಹ ಮಾಡಿದಂತಾಗುತ್ತದೆ ಎಂದಿದ್ದಾರೆ.
‘ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗದಿರಲು ವಸಂತ ಬಂಗೇರರ ಸಿಂಹಪಾಲು ಇದೆ’:
ಸೌಜನ್ಯಳಿಗೆ ನ್ಯಾಯ ಸಿಗದಿರಲು ಕಾರಣ ನಿಮ್ಮ ಬೇಜವಬ್ದಾರಿಯ ರಾಜಕೀಯ. ನಿಮ್ಮ ಅವಧಿಯಲ್ಲಿ ತನಿಖೆ ನಡೆಯುತ್ತಿದ್ದಾಗ, ತನಿಖೆಯ ಹಾದಿ ತಪ್ಪುತ್ತಿದ್ದಾಗ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಬೇಕಿತ್ತು. ಅಂದಿನ ಹೋರಾಟದಲ್ಲಿ ನೀವು ಯಾಕೆ ಭಾಗವಹಿಸಲಿಲ್ಲ. ಆವತ್ತು ಸೌಜನ್ಯಾ ನ್ಯಾಯಕ್ಕೆ ಯಾಕೆ ಪ್ರಯತ್ನ ಪಡಲಿಲ್ಲ. ಅಧಿವೇಶನದಲ್ಲೂ ಒಂದೇ ಬಾರಿ ಮಾತನಾಡಿದ್ದು. ಚಾರ್ಜ್ಶೀಟ್ ವ್ಯವಸ್ಥೆಯನ್ನು ಯಾಕೆ ಪರಿಶೀಲಿಸಲಿಲ್ಲ. ನೀವು ಸೌಜನ್ಯ ಪ್ರಕರಣದ ಸಂದರ್ಭದಲ್ಲಿ ನಿಮ್ಮ ಹಕ್ಕು, ಕರ್ತವ್ಯ ಚಲಾಯಿಸದೇ ಸೊಪ್ಪುತರಲು ಹೋಗಿದ್ರಾ..? ಆವತ್ತು ಈ ಪ್ರಕರಣಕ್ಕೆ ನೀವು ಸರಿಯಾಗಿ ಸ್ಪಂದನೆ ಕೊಡುತ್ತಿದ್ದರೆ ಇವತ್ತು ಸೌಜನ್ಯಳಿಗೆ ನ್ಯಾಯ ಸಿಗಲಿ ಅಂತ ಈ ರೀತಿಯ ಹೋರಾಟದ ಅವಶ್ಯಕತೆ ಇರಲಿಲ್ಲ. ಆಕೆಗೆ ನ್ಯಾಯ ಸಿಗದೇ ಇರಲು ನೀವು ಕಾರಣ.
ನಿಮ್ಮ ಅಧಿಕಾರವಧಿಯಲ್ಲಿ ಎಷ್ಟು ಅಸಹಜ ಸಾವಾಗಿದೆ ಎಂದು ಅಂಕಿ ಅಂಶ ನೋಡಿ, 2018ರ ಬಳಿಕ ತಾಲೂಕಿನಲ್ಲಿ ಎಷ್ಟು ಅಸಹಜ ಸಾವಾಗಿದೆ ನೋಡಿ. ನಿಮ್ಮೊಂದಿಗೆ ಇರುವವರು ಹತ್ಯೆಯ ಆರೋಪಿಗಳು. ಅಂಡಿAಜೆಯ ಸುಜಾತ ಪ್ರಕರಣ, ವೇಣೂರಿನ ವನಜ ಪ್ರಕರಣ, ಉಜಿರೆಯ ಹೇಮಲತ ಪ್ರಕರಣ, ಪದ್ಮಲತಾ, ವೇದವಲ್ಲಿ, ಸುನಂದ ಕೊಲೆ ಪ್ರಕರಣಗಳು ನಡೆದಿದೆ. ನೀವು ಯಾವ ಪ್ರಕರಣಕ್ಕೆ ನ್ಯಾಯ ಕೊಡಿಸಿದ್ರಿ..?
ನಿಮಗೆ 80 ವರ್ಷ ಸಮೀಪಿಸುತ್ತಿದೆ. ಸಜ್ಜನಿಕೆಯ ರಾಜಕಾರಣಿಯಾಗಿ, ಅಭಿವೃದ್ಧಿಗೆ ಸಹಕಾರ ಕೊಡಿ, ನ್ಯಾಯದ ಪರವಾಗಿ ಇರಿ. ಡೋಂಗಿ, ಕಪಟ, ಸುಳ್ಳು, ಮಿಮಿಕ್ರಿಯ ರಾಜಕಾರಣ ಮಾಡಬೇಡಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೊಟ್ಯಾನ್ ಕಾರ್ಯದರ್ಶಿಗಳಾದ ಶ್ರೀನಿವಾಸ್ ಧರ್ಮಸ್ಥಳ, ಗಣೇಶ್ ಗೌಡ ನಾವೂರು, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.