ಕದ್ದ ಸ್ಕೂಟರ್‌ನಲ್ಲಿಯೇ ತಾಲೂಕಿನಾದ್ಯಂತ ಸರಣಿ ಕಳ್ಳತನ : ಅಂತರ್ ರಾಜ್ಯ ಮಹಾಖದೀಮ ಧರ್ಮಸ್ಥಳದ ಖಾಕಿ ಬಲೆಗೆ..!


ಬೆಳ್ತಂಗಡಿ :
ಸುಮಾರು ಒಂದುವರೆ ತಿಂಗಳಿನಿಂದ  ತಾಲೂಕಿನ 25 ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಕಳವು ಮಾಡಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಮಹಾ ಖದೀಮ ಕೊನೆಗೂ ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಗಸ್ಟ್ 9 ರಂದು ರಾತ್ರಿ 10 ಗಂಟೆಯಿಂದ ಆಗಸ್ಟ್ 10ರ ಬೆಳಿಗ್ಗೆ 6.30ರ ಸಮಯದಲ್ಲಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಪ್ರಸನ್ನ ಅರಿಗ ಎಂಬವರ ಪದ್ಮಾಂಬ ಪ್ರಾವಿಜನ್ ಸ್ಟೋರ್‌ನ ಬೀಗವನ್ನು ರಾಡ್‍ನಿಂದ ಮುರಿದು ಒಳಹೋಗಿ ಕ್ಯಾಶ್ ಕೌಂಟರ್ ನಲ್ಲಿದ್ದ 5ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಸನ್ನ ಅರಿಗ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಆಗಸ್ಟ್. 25 ರಂದು ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ ಪೆಕರ್ ಅನಿಲ್ ಕುಮಾರ್ ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್ ವಾಹನದಲ್ಲಿ ಬಂದ ವ್ಯಕ್ತಿಯನ್ನು ಅಡ್ಡಹಾಕಿ ವಾಹನ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದಾಖಲೆಗಳಿಲ್ಲದೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದಾಗ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಕೂಟರ್ ಕಳ್ಳತನ ಮಾಡಿ ಅದರಲ್ಲಿಯೇ ಹಲವು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ, ಅತ್ತೂರು ಗ್ರಾಮದ ದಿ.ಕೊರಗಪ್ಪ ಪೂಜಾರಿ ಮಗನಾದ ಸುರೇಶ ಕೆ. ಪೂಜಾರಿ(50) ಎಂದು ತಿಳಿದು ಬಂದಿದೆ.
ಈತನು ಮಟ್ಕಾ (ಓಸಿ) ಆಡುವ ಚಟವುಳ್ಳವನಾಗಿದ್ದು, ಕಳ್ಳತನ ಮಾಡಿದ ಹಣವನ್ನು ಮಟ್ಕಾ ಆಟಕ್ಕೆ ಕಟ್ಟಿ ಸೋತಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿರುತ್ತಾನೆ. ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆ, ಹಿರಿಯಡಕ ಠಾಣೆ, ಪಡುಬಿದ್ರಿ ಠಾಣೆ, ಮುಲ್ಕಿ ಠಾಣೆ, ಹೆಬ್ರಿ ಠಾಣೆ, ಉಡುಪಿ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮತ್ತು ಬೆಳಗಾಂ ಮಾರ್ಕೆಟ್ ಪೊಲೀಸ್ ಠಾಣೆಗಳು ಸೇರಿ ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು, ಕಳೆದ 2ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದು ವಾಪಸ್ ಕಳ್ಳತನ ಕೃತ್ಯ ಮುಂದುವರೆಸಿದ್ದ.

ಬಂದಿತ ಆರೋಪಿಯಿಂದ 20,220 ರೂಪಾಯಿ ನಗದು ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟಿ ವಾಹನ ಒಟ್ಟು ಅಂದಾಜು ಮೌಲ್ಯ 45 ಸಾವಿರ ಆಗಿದ್ದು, ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಆಗಸ್ಟ್ 26 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನಿಲ್ ಕುಮಾರ್ ಡಿ,ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ಅಲ್ಲದೇ ಈ ಹಿಂದೆ ಪಿಎಸ್ಐ ಆಗಿದ್ದ (ತನಿಖೆ) ಲೋಲಾಕ್ಷ ಪಿ ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್ ತಂಡದ ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ಶೇಖರ್, ಸತೀಶ ನಾಯ್ಕ ಜಿ, ಶಶಿಧರ, ಮಂಜುನಾಥ,ಧರ್ಮಪಾಲ್, ಅಸ್ಲಾಂ, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ,ಅಭಿಜಿತ್ ಮೆಹಬೂಬ್, ನಾಗರಾಜ ಬುಡ್ರಿ, ದೀಪು, ಮಧು, ಹರೀಶ್, ಜಗದೀಶ್ , ಚಾಲಕ ಲೋಕೇಶ್ ಕಾರ್ಯಾಚರಣೆ ನಡೆಸಿದ್ದರು.

error: Content is protected !!