ಧರ್ಮಸ್ಥಳ – ನಾರಾವಿ ಸರ್ಕಾರಿ ಬಸ್ ತಡೆ: ಸರ್ಕಾರದ ನಡೆ ಖಂಡಿಸಿ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ..!

ಬೆಳ್ತಂಗಡಿ: ಧರ್ಮಸ್ಥಳ – ನಾರಾವಿ ಹೆದ್ದಾರಿಗೆ ಸರ್ಕಾರಿ ಬಸ್ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆಯ‌ನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ  ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.‌

ಬೆಳ್ತಂಗಡಿ ತಾಲೂಕು ಸಂಚಾಲಕ ಸುವಿತ್ ಶೆಟ್ಟಿ ಮಾತನಾಡಿ ಅಳದಂಗಡಿ ನಾರಾವಿ ಭಾಗದಿಂದ ತಾಲೂಕಿನ ಶಾಲಾ ಕಾಲೇಜಿಗೆ ಹಲವಾರು ವಿದ್ಯಾರ್ಥಿಗಳು ಬರುತಿದ್ದು, ಇವರು ಸರ್ಕಾರಿ ಬಸ್ಸಿನ ಸಮಸ್ಯೆಯನ್ನು ಎದುರಿಸುತಿದ್ದರು.  ಹೀಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರಿ ಬಸ್ ಒದಗಿಸುವಂತೆ ಮನವಿ ನೀಡಿದ್ದು, ಇದಕ್ಕೆ ಸರಿಯಾಗಿ ಸರ್ಕಾರಿ ಬಸ್ಸಿನ ವ್ಯವಸ್ಥೆಗೆ ಆದೇಶ ಹೊರಡಿಸಿ ಆಗಸ್ಟ್ 25 ರಿಂದ ಬಸ್ ಸೇವೆ ಪ್ರಾರಂಭವಾಗಲಿದೆ ಎಂಬ ಮಾಹಿತಿ ಕೆ ಎಸ್ ಆರ್ ಟಿ ಸಿ  ನೀಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಬಸ್ ತಡೆ ಹಿಡಿದಿರುವ ಕಾರಣ ಈ ರಾಜ್ಯ ಸರ್ಕಾರದ ನಡೆಯನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಅದಲ್ಲದೆ ಎರಡು ದಿನದಲ್ಲಿ ಬಸ್ ವ್ಯವಸ್ಥೆ ಮಾಡದೇ ಹೋದಲ್ಲಿ ಬೃಹತ್ ಮಟ್ಟದ ಹೋರಾಟ ನಡೆಯಲಿದೆ. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಸರ್ಕಾರ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ನಂತರ ಬೆಳ್ತಂಗಡಿ ಸಾರಿಗೆ ನಿಯಂತ್ರಕರ ಮೂಲಕ ಡಿಪೋ ಮ್ಯಾನೇಜರ್ ಅವರಿಗೆ ಮನವಿ ನೀಡಲಾಯಿತು. ಈ ವೇಳೆ ಹೋರಾಟ ಪ್ರಮುಖರಾದ ಸುಮಂತ್, ಶ್ರೇಯಸ್ ಸೇರಿದಂತೆ ವಿದ್ಯಾರ್ಥಿಗಳು ಸೇರಿದ್ದರು.

error: Content is protected !!