ಧರ್ಮಸ್ಥಳ: ಸೌಜನ್ಯ ನ್ಯಾಯದ ಹೋರಾಟದಲ್ಲಿ ಧರ್ಮಸ್ಥಳ ಕ್ಷೇತ್ರದ ತೇಜೋವಧೆ ನಡೆಯುತ್ತಿದೆ, ಕ್ಷೇತ್ರದ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳನ್ನು ಜೀವದಾಸೆ ಬಿಟ್ಟು ಹತ್ತಿಕ್ಕುತ್ತೇವೆ ಎಂದು ಧರ್ಮಸ್ಥಳ ಗ್ರಾಮಸ್ಥರು ಹೇಳಿದ್ದಾರೆ.
ಆ.24ರಂದು ಧರ್ಮಸ್ಥಳದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು ‘ಪಾಂಗಾಳ ನಿವಾಸಿ ಸೌಜನ್ಯಳಿಗೆ ನ್ಯಾಯಸಿಗಬೇಕೆಂದು ನಾವೆಲ್ಲ ಹಲವಾರು ಬಾರಿ ಆಗ್ರಹಿಸಿದ್ದೇವೆ. ಆಕೆಯ ಹತ್ಯೆಯ ಕುರಿತು ನಮಗೂ ದುಃಖವಿದೆ. ಆದರೆ, ಈಗಿನ ಬೆಳವಣಿಗೆಯನ್ನು ಗಮನಿಸಿದಾಗ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳುತ್ತಿರುವ ಹೋರಾಟಗಾರರ ನಿಜವಾದ ಉದ್ದೇಶ ದುರುದ್ದೇಶವೇ ಆಗಿದೆ ಎಂಬುದು ಅತ್ಯಂತ ಸ್ಪಷ್ಟವಾಗುತ್ತಿದೆ. ಈ ಪ್ರಕರಣವನ್ನು ಒಂದು ನೆಪವಾಗಿರಿಸಿಕೊಂಡು ನಮ್ಮ ಕ್ಷೇತ್ರಕ್ಕೆ ಕಳಂಕ ಹಚ್ಚುವುದನ್ನು ನಾವು ಸರ್ವತಾ ಒಪ್ಪುವುದಿಲ್ಲ ಹಾಗೂ ತೀವ್ರವಾಗಿ ಖಂಡಿಸುತ್ತಿದ್ದೇವೆ. ರೌಡಿಶೀಟರ್ ದೇವಸ್ಥಾನವನ್ನು ಜೆ.ಸಿ.ಬಿ ಮೂಲಕ ನಾಶಗೊಳಿಸಬೇಕೆಂದು ಪ್ರಚೋದನಾಕಾರಿ ಹೇಳಿಕೆ ನೀಡುವುದು ಮತ್ತು ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿಗೆ ಕೈಮುಗಿಯುವುದು ವೇಸ್ಟ್ ಎಂಬಿತ್ಯಾದಿ ಅನೇಕ ಅವಹೇಳನಕಾರಿ ಮಾತುಗಳನ್ನಾಡುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಮಾಡುವುದು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವುದ್ದಷ್ಟೇ ಮುಖ್ಯ ಉದ್ದೇಶವಾಗಿದೆ. ಇಂತಹ ಸೂಕ್ಷ್ಮ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಪ್ರಾರ್ಥನೆ ಮೊದಲಾದ ನೆಪದಲ್ಲಿ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳು ಹಾಗೂ ಅವರಿಂದ ಪ್ರಭಾವಿತರಾದವರು ಸಹ ಬೇರೆ ಬೇರೆ ಸಂಘಟನೆಗಳ ಹೆಸರಿನ ಅಡಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಗುಂಪು ಕಟ್ಟಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರವೇಶಿಸಿ ಅವರ ದುರುದ್ದೇಶಿತ ಸಂಚುಗಳನ್ನು ಕಾರ್ಯಗತಗೊಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಶಾಂತಿ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅವರ ಯಾವುದೇ ಪ್ರಯತ್ನವನ್ನು ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮದ ಸಮಸ್ತರು ಒಂದಾಗಿ ದೃಢ ನಿರ್ಧಾರ ಮಾಡಿರುತ್ತೇವೆ. ಆದುದರಿಂದ ದೇಶದ ಸಂವಿಧಾನ, ನ್ಯಾಯಾಲಯ, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಸಿ.ಬಿ.ಐ., ಸಿ.ಐ.ಡಿ. ಮತ್ತು ಪೊಲೀಸ್ ಇಲಾಖೆಗಳನ್ನು ತುಚ್ಛ ಮಾತುಗಳಿಂದ ಅವಮಾನಿಸುತ್ತಿರುವ ಒಬ್ಬ ರೌಡಿಶೀಟರ್ ಅಥವಾ ಆತನ ಹಿಂಬಾಲಕರು ಅಥವಾ ಆತನಿಂದ ಪ್ರೇರೇಪಿತರಾದ ಕೆಟ್ಟ ಶಕ್ತಿಗಳು ಅಥವಾ ವ್ಯಕ್ತಿಗಳು ಯಾವುದೇ ಸಂಘಟನೆಯ ಹೆಸರಿನಿಂದ ಬಂದರೂ ಶ್ರೀ ಕ್ಷೇತ್ರ ಧರ್ಮಸ್ಥಳದ ರಕ್ಷಣೆಗಾಗಿ ನಿರ್ದಾಕ್ಷಿಣ್ಯವಾಗಿ ಎಷ್ಟೇ ಬೆಲೆ ತೆತ್ತಾದರೂ ಸಮಸ್ತ ಧರ್ಮಸ್ಥಳದ ಗ್ರಾಮಸ್ಥರಾದ ನಾವು ಅಂತಹ ಪ್ರಯತ್ನಗಳನ್ನು ತಡೆಯುವುದಾಗಿ ನಿರ್ಧರಿಸಿರುತ್ತೇವೆ.
ಧರ್ಮಸ್ಥಳದ ಪಾವಿತ್ರ್ಯತೆ ರಕ್ಷಣೆಗೆ ಪ್ರಾಣತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದು ಗ್ರಾಮಸ್ಥರು ದೃಢಸಂಕಲ್ಪ ಪ್ರಕಟಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ, ನ್ಯಾಯಾಲಯ, ಸರ್ಕಾರ, ಸಂವಿಧಾನ, ಪೊಲೀಸ್ ಇಲಾಖೆ, ಸಿ.ಬಿ.ಐ. ಬಗ್ಗೆ ಸದಾ ಅವಹೇಳನ ಮಾಡುತ್ತಾ ಸಾಮಾಜಿಕ ಶಾಂತಿ-ಸಾಮರಸ್ಯಕ್ಕೆ ಭಂಗ ತರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅನುಯಾಯಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್‌ಠಾಣೆ ಮೂಲಕ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ, ಗೃಹ ಸಚಿವರು ಮತ್ತು ಎಸ್.ಪಿ. ಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಾವಿರಾರೂ ಮಂದಿ ಗ್ರಾಮಸ್ಥರು ಭಾಗಿಯಾಗಿದ್ದರು.