ಬೆಳ್ತಂಗಡಿ : ಸೌಜನ್ಯ ಪರ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯ ಮತ್ತು ಹೊರರಾಜ್ಯದಲ್ಲೂ ಹೋರಾಟಗಳು ಆರಂಭವಾಗಿದ್ದು, ಕಳೆದ 11 ವರ್ಷಗಳಿಂದ ಸೌಜನ್ಯ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಮುಂದಾಳತ್ವವನ್ನು ವಹಿಸಿಕೊಂಡಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಜೀವಕ್ಕೆ ಅಪಾಯ ಅಗುವ ಸಾಧ್ಯತೆ ಇರುವ ಕಾರಣ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರು ಪೊಲೀಸ್ ರಕ್ಷಣೆ ನೀಡುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಆಗಸ್ಟ್ 17 ರಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ರಕ್ಷಣೆಗಾಗಿ ಇಬ್ಬರು ಗನ್ ಮ್ಯಾನ್ ನೀಡಲು ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಗೃಹ ಸಚಿವ ಪರಮೇಶ್ವರ್ ದಕ್ಷಿಣ ಕನ್ನಡ ಎಸ್ಪಿ ರೀಷ್ಯಂತ್ ಅವರಿಗೆ ಗನ್ ಮ್ಯಾನ್ ನೀಡುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರತೆಗಾಗಿ ಮನವಿ ನೀಡಿದ್ದ ಮಹೇಶ್ ಶೆಟ್ಟಿ:
ಕಳೆದ ಒಂದು ತಿಂಗಳ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಗನ್ ಮ್ಯಾನ್ ಪಡೆಯಲು ಮನವಿ ಪತ್ರ ನೀಡಿದ್ದರು. ಇದರ ಬಗ್ಗೆ ಎಸ್ಪಿ ಗುಪ್ತಚರ ಇಲಾಖೆಗೆ ವರದಿ ನೀಡಲು ಆದೇಶ ನೀಡಿದ್ದರು. ಗುಪ್ತಚರ ಇಲಾಖೆಯ ವರದಿಯಲ್ಲಿ ಯಾವುದೇ ಜೀವ ಬೆದರಿಕೆಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಇಲ್ಲವೆಂದು ಎಸ್ಪಿಗೆ ಗುಪ್ತಚರ ಇಲಾಖೆ ವರದಿ ನೀಡಿದ್ದರು ಅದ್ದರಿಂದ ಗನ್‌ಮ್ಯಾನ್ ನೀಡಲು ಪೊಲೀಸ್ ಇಲಾಖೆ ಮುಂದಾಗಿರಲ್ಲಿಲ್ಲ.
ದ.ಕ. ಎಸ್.ಪಿ. ರಿಷ್ಯಂತ್ ರವರು ಸರಕಾರದ ಆದೇಶದ ಮೇರೆಗೆ ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಗುಪ್ತಚರ ಇಲಾಖೆ ಜೊತೆ ಸಂಪರ್ಕಿಸಿ ಆಂತರಿಕ ಮಾಹಿತಿ ಕಲೆ ಹಾಕಿ ನಂತರ ವರದಿ ತರಿಸಿಕೊಂಡು ಅವಶ್ಯಕತೆ ಇದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ
ಇಬ್ಬರು ಗನ್ ಮ್ಯಾನ್ ಕಳಿಸಿಕೊಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.