ಆ28 ರಂದು ಸೌಜನ್ಯಾ  ಅತ್ಯಾಚಾರ ಕೊಲೆ ಪ್ರಕರಣ ಮರು ತನಿಖೆ ಒತ್ತಾಯಿಸಿ ಪ್ರತಿಭಟನೆ: ಜನಪರ ಒಕ್ಕೂಟಗಳಿಂದ ಚಲೋ ಬೆಳ್ತಂಗಡಿ ಮಹಾಧರಣಿ ಕಾರ್ಯಕ್ರಮ: ಮಹೇಶ್ ಶೆಟ್ಟಿ ತಿಮರೋಡಿಯನ್ನು ಸಿಎಂ ಸಿದ್ಧರಾಮಯ್ಯರ ಭೇಟಿ ಮಾಡಿಸಿದ್ದೆ:ವಸಂತ ಬಂಗೇರ

 

 

ಬೆಳ್ತಂಗಡಿ : ‘ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒತ್ತಾಯಿಸಿ ಚಲೋ ಬೆಳ್ತಂಗಡಿ, ಮಹಾಧರಣಿ ಕಾರ್ಯಕ್ರಮ ಅಗಸ್ಟ್ 28 ರಂದು ಬೆಳ್ತಂಗಡಿ ಮಿನಿವಿಧಾನಸೌಧದ ಬಳಿ ನಡೆಯಲಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಬಡ, ಮುಗ್ದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂಬ ಏಕೈಕ ಉದ್ದೇಶದಡಿಯಲ್ಲಿ ಈ ಪ್ರತಿಭಟನೆ ನಡೆಯಲಿದೆ’ ಎಂದು ಚಲೋ ಬೆಳ್ತಂಗಡಿ ಮಹಾಧರಣಿ ಕಾರ್ಯಕ್ರಮದ ಗೌರವ ಸಂಚಾಲಕ, ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.

ಅವರು ಅ10 ಗುರುವಾರ ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ‌ ನಡೆದ   ಪತ್ರಿಕಾಗೋಷ್ಠಿಯಲ್ಲಿ ಚಲೋ ಬೆಳ್ತಂಗಡಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ‘ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸೌಜನ್ಯ ಅತ್ಯಾಚಾರ, ಕೊಲೆ ಪುಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳನ್ನು ಬಲಗೊಳಿಸಿದೆ. ತನಿಖೆಯ ಸಂದರ್ಭ ಸಿಬಿಐ ಪ್ರಭಾವಕ್ಕೊಳಗಾಗಿ ಸಂತೋಷ್ ರಾವ್ ಮೇಲೆ ಆರೋಪ ಪಟ್ಟಿ ಹೊರಿಸಿರುವ ಸಾಧ್ಯತೆಯನ್ನು ಎತ್ತಿತೋರಿಸಿದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಸೌಜನ್ಯ ಪುಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಹಾಗೂ ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಅಧಿವೇಶನದಲ್ಲಿಒತ್ತಾಯಿಸಿದ್ದು ನಾನು. ನನ್ನ ಜೊತೆ ಅಂದಿನ ಪುತ್ತೂರು ಶಾಸಕರಾಗಿದ್ದ ಶಕುಂತಲಾ ಶೆಟ್ಟಿ ಸೇರಿದಂತೆ ಇತರ ಕೆಲವು ಶಾಸಕರು ಧ್ವನಿಗೂಡಿಸಿದ್ದರು. ಅಂದಿನ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಹಲವು ವಿಚಾರಗಳನ್ನು ಅವರಿಗೆ ಖುದ್ದಾಗಿ ತಿಳಿಸಿದ್ದೇನೆ. ಆದರೆ ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಜನತೆ ಸಿಬಿಐ ಮೇಲಿನ ನಂಬಿಕೆಯನ್ನು ಸಕಾರಣವಾಗಿಯೇ ಕಳೆದು ಕೊಂಡಿದ್ದಾರೆ. ಸಿಬಿಐ ಪ್ರಭಾವಿಗಳ ಒತ್ತಡಕ್ಕೆ ಬಲಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಬಿಐ ಬೇಡ, ರಾಜ್ಯದ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತಿದ್ದಾರೆ. ಸತ್ಯ ಸಂಗತಿ ಬಹಿರಂಗಗೊಳ್ಳುವ ಅಗತ್ಯವಿದೆ. ಅದಕ್ಕಾಗಿ ಅಸಹಜ ಸಾವುಗಳ ಪುಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಇದೇ ವಿಚಾರದಲ್ಲಿ ಈಚೆಗೆ ಸೌಜನ್ಯ ಕುಟುಂಬದವರನ್ನು ಮತ್ತು ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿಸಿದ್ದೆ ಎಂದರು.

ಕಾರ್ಯಕ್ರಮದ ಸಂಚಾಲಕ, ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ, ‘ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಲಿವೆ. ನಿಜವಾದ ಆರೋಪಿ ಯಾರು ಎಂದು ಪತ್ತೆಯಾಗಬೇಕು ಎಂಬುದೇ ನಮ್ಮ ಹೋರಾಟದ ಉದ್ದೇಶವಾಗಿದೆ ಎಂದರು.

ಡಿ.ವೈ.ಎಫ್. ಐ. ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಜಯವಿಕ್ರಮ್, ದಲಿತ ಮುಖಂಡರಾದ ವಸಂತ ಬಿ.ಕೆ., ಹಾಗೂ ರಮೇಶ್ ಆರ್ ಇದ್ದರು.

error: Content is protected !!