ಕಾಡಬಾಗಿಲು: 30ಕ್ಕೂ ಹೆಚ್ಚು ಅರಣ್ಯವಾಸಿಗಳ ಸಂಪರ್ಕ ಸೇತುವೆ ಕುಸಿತ..!: ಸೇತುವೆ ಮೇಲೆ ವಾಹನ ಸಂಚಾರ ಅಪಾಯ:ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯೇ ಗತಿ..?

 

ಬೆಳ್ತಂಗಡಿ; ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿದು ಅರಣ್ಯವಾಸಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಸುಮಾರು 50 ವರ್ಷದ ಹಿಂದೆ ನಿರ್ಮಾಣ ಮಾಡಲಾದ ಕಾಡಬಾಗಿಲು ಎಂಬಲ್ಲಿಯ ಸೇತುವೆಯ ಮಧ್ಯದ ಪಿಲ್ಲರ್ ಇಂದು(ಜು.26) ಕುಸಿದಿದೆ. ಈ ಸೇತುವೆ ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಇದನ್ನು ದಾಟಿ ಸುಮಾರು 30 ಅರಣ್ಯವಾಸಿ ಮಲೆಕುಡಿಯ ಮತ್ತು ಇತರೆ ಅರಣ್ಯವಾಸಿ ಕುಟುಂಬಗಳು ವಾಸಿಸುತ್ತಿದ್ದಾರೆ. ಈ ಸೇತುವೆ ಇಲ್ಲಿನ ಜನರಿಗೆ ಸಂಪರ್ಕದ ಹಾದಿ. ಆದರೆ ಇದೀಗ ಸೇತುವೆ ಕುಸಿದು ಸಂಪರ್ಕಕ್ಕೆ ತೊಂದರೆಯಾಗಿದೆ. ಕುಸಿದಿರುವ ಸೇತುವೆ ಮೇಲೆ ಇನ್ನು ವಾಹನ ಸಂಚಾರ ಅಪಾಯ. ಹೀಗಾಗಿ ಇಲ್ಲಿನ ಜನ ಇನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದ್ದು, ಪಡಿತರಕ್ಕೂ, ತುರ್ತು ಸೇವೆಗಳಿಗೂ ಕಾಲ್ನಡಿ ಮೂಲಕವೇ ಪಟ್ಟಣಕ್ಕೆ ಬರಬೇಕಾಗಿದೆ.


ಕುಕ್ಕುಜೆ ಸಮೀಪದ ಸೇತುವೆ ಕುಸಿತವಾದ ಸಂದರ್ಭದಲ್ಲಿ ಅಧಿಕಾರಿಗಳು ಕಾಡಬಾಗಿಲು ಸೇತುವೆಯನ್ನೂ ಪರಿಶೀಲನೆ ನಡೆಸಿದ್ದರು. ಆದರೆ ಹೊಸ ಸೇತುವೆ ನಿರ್ಮಾಣ ಮಾಡಲು ಇದು ಕುದುರೆಮುಖ ರಕ್ಷಿತಾರಣ್ಯಕ್ಕೆ ಸಂಬಂಧಪಟ್ಟ ಸ್ಥಳ ಆಗಿರುವುದರಿಂದ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಜೊತೆಗೆ ಇಲ್ಲಿನ ಜನ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಆದರೂ ಈ ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕು, ಅರಣ್ಯವಾಸಿಗಳಿಗೆ ಸಂಚರಿಸಲು ತೊಂದರೆಯಾಗದಂತೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಚೀಂಕ್ರ ಮಲೆಕುಡಿಯ ಬರೆಂಗಾಡಿ ಹಾಗೂ ಅರಣ್ಯವಾಸಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

error: Content is protected !!