ಬೆಳ್ತಂಗಡಿ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಸರ್ಕಾರದಿಂದ ಲಕ್ಷ ಕೊವೀಡ್ ಹಣ ಬಂದಿದೆ, ನಾನು ಆ ಸೊಸೈಟಿಯ ನೌಕರ ಆದ್ದರಿಂದ ಅದನ್ನು ಪಡೆದುಕೊಳ್ಳಬೇಕಾದರೆ ಇಂತಿಷ್ಟು ಹಣ ನೀಡಬೇಕು ಎಂದು ಅಪರಿಚಿತ ವ್ಯಕ್ತಿಯೊಬ್ಬ ವೃದ್ಧರೊಬ್ಬರಿಗೆ ವಂಚಿಸಿ ಹಾಡು ಹಗಲೇ ಸಾವಿರ ರೂ. ಹಣ ಪಡೆದು ಪರಾರಿಯಾದ ಘಟನೆ ಜು.18ರಂದು ಸಂತೆಕಟ್ಟೆ ಬಳಿ ನಡೆದಿದೆ.
ಅನಾರೋಗ್ಯದ ಕಾರಣಕ್ಕೆ ಸರಕಾರಿ ಆಸ್ಪತ್ರೆಗೆ ತೆರಳಿದ ಬೆಳ್ತಂಗಡಿ ವೃದ್ಧರೊಬ್ಬರು ವಾಪಾಸ್ ಬರುತ್ತಿದ್ದಾಗ, ಅಪರಿಚಿತನೊಬ್ಬ ಬೆಳ್ತಂಗಡಿ ಮಾರಿಗುಡಿ ಸಮೀಪ ಬಂದು ಪರಿಚಯಸ್ಥನಂತೆ ಕ್ಷೇಮ-ಸಮಾಚಾರ ವಿಚಾರಿಸಿ, ನಂತರ ಕೊವೀಡ್ ಕ್ಯಾಂಪ್ ನಲ್ಲಿ ಇದ್ದವರಿಗೆ ಸರ್ಕಾರದಿಂದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಲಕ್ಷ ಹಣ ಬಂದಿದೆ. ನಾನು ಆ ಬ್ಯಾಂಕಿನ ನೌಕರ. ಇದು ಕೇವಲ ಗೌಡ ಸಮುದಾಯಕ್ಕೆ ಮಾತ್ರ ಬಂದಿದೆ. ಹೀಗಾಗಿ ನಿಮಗೂ 1 ಲಕ್ಷದ 27 ಸಾವಿರ ರೂ. ಬಂದಿದ್ದು, ಅದನ್ನು ಪಡೆದುಕೊಳ್ಳಲು ನೀವು ಮ್ಯಾನೆಜರ್ ಅವರಿಗೆ 7 ಸಾವಿರ ರೂ ನೀಡಬೇಕು ಎಂದು ಹೇಳಿ ನಂಬಿಸಿದ್ದಾನೆ. ಆ ಕ್ಷಣ ವ್ಯಕ್ತಿ ಬಳಿ 7 ಸಾವಿರ ರೂ. ಇಲ್ಲ ಎಂದು 1500ರೂ ನೀಡಿದ್ದಾರೆ. ಹಣ ಪಡೆದಾತ ಕುತ್ಯಾರು ಶ್ರೀ ಸೋಮಾನಾಥೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬೈಕ್ ನಿಲ್ಲಿಸಿ, ಮೊಬೈಲ್ ನಲ್ಲಿ ಮಾತನಾಡಿದಂತೆ ನಟಿಸಿ, ನಂತರ ವ್ಯಕ್ತಿಯನ್ನು ಬೈಕ್ ನಿಂದ ಇಳಿಸಿ, ಇಲ್ಲೇ ಇರಿ, ನಾನು ಈಗ ಬರುತ್ತೇನೆ ಎಂದು ಹೇಳಿ ಪರಾರಿಯಾಗಿದ್ದಾನೆ. ಹಣ ನೀಡಿದ ವ್ಯಕ್ತಿ ಸುಮಾರು ಅರ್ಧ ತಾಸು ಕಾದು, ಬಳಿಕ ನಾನು ಮೋಸ ಹೋದೆ ಎಂದು ವಾಪಾಸ್ ಮನೆಗೆ ಬಂದಿದ್ದಾರೆ. ಒಂದು ವಾರಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ಅವರ ಮನೆಯವರು ಪ್ರಜಾಪ್ರಕಾಶ ನ್ಯೂಸ್ ಕಚೇರಿಗೆ ಪೋನ್ ಮೂಲಕ ಮಾಹಿತಿ ನೀಡಿ ತಮ್ಮ ಅಸಾಹಯಕತೆಯನ್ನು ತಿಳಿಸಿದ್ದಾರೆ.
ತಾಲೂಕಿನಲ್ಲಿ ರಾತ್ರಿ ಕಳ್ಳರ ಕಾಟ ಒಂದೆಡೆಯಾದರೆ, ಹಗಲು ದರೊಡೆಕೋರರು ಹುಟ್ಟಿಕೊಂಡಿದ್ದಾರೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಹಣದ ವಿಚಾರದಲ್ಲಿ ಇತ್ತೀಚೆಗೆ ಜನ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಒಟಿಪಿ ವಂಚಕರಲ್ಲದೆ ನೇರವಾಗಿ ಹಣ ದೋಚುವ ಐಡಿಯಾವನ್ನು ಆರಂಭಿಸಿದ್ದಾರೆ. ಇವರು ವಯಸ್ಸಾದವರನ್ನೇ ಟಾರ್ಗೆಟ್ ಮಾಡುತ್ತಿದ್ದು, ಅವರನ್ನು ಸುಲಭವಾಗಿ ಮರುಳುಗೊಳಿಸಬಹುದು ಎಂಬುದನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚರಗೊಳ್ಳಬೇಕಿದೆ. ನಿಮ್ಮ ಯಾವುದೇ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ ಎಂದು ಫೋನ್ ಕರೆ ಮೂಲಕ ಅಥವಾ ನೇರವಾಗಿ ಎಷ್ಟೇ ನಂಬಿಕೆಯ ವ್ಯಕ್ತಿ ಹೇಳಿದರೂ ಮೊದಲು ಬ್ಯಾಂಕ್ ನಲ್ಲಿ ವಿಚಾರಿಸಿ, ವಂಚನೆಯಿಂದ ಸುರಕ್ಷಿತರಾಗಿರಿ ಎಂಬುದು ಪ್ರಜಾಪ್ರಕಾಶ ನ್ಯೂಸ್ ತಂಡದ ಮನವಿ..