ದ.ಕ: ಕರ್ನಾಟಕ ರಾಜ್ಯದಲ್ಲಿ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತಿಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಮತ್ತು ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗವು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿ ಅದರಂತೆ ಚುನಾವಣೆ ನಡೆಸಲು ಆದೇಶಿಸಿರುತ್ತದೆ. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ 3 ತಾಲೂಕಿನ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ (ಜು.21) ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯಸಮ್ಮತ, ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ನಡೆಸಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರು ಪುತ್ತೂರು ತಾಲೂಕಿನ ನಿಡ್ನಳ್ಳಿ, ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ , ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಇಂದು ಸಂಜೆ 5 ಗಂಟೆಯಿಂದ ಚುನಾವಣೆ ಮುಗಿಯುವವರೆಗೆ 3 ಕಿ.ಮೀ. ವ್ಯಾಪ್ತಿಯನ್ನು ಮದ್ಯ ಮುಕ್ತ ದಿನಗಳಂದು ಘೋಷಿಸಿ, ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಜೊತೆಗೆ ಯಾವುದೇ ಹೊಟೇಲುಗಳಲ್ಲಾಗಲೀ ನಾನ್ ಪ್ರೊಪ್ರೈಟರ್‌ಗಳಲ್ಲಿ, ಸ್ಟಾರ್ ಹೊಟೇಲ್‌ಗಳಲ್ಲಾಗಲೀ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡಾ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.