ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ಸೋವದಲ್ಲಿ ತುಳುವರ ಧ್ವನಿ ‘ಬಾಯಿಲ್ಡ್ ರೈಸ್ ’

 

ದ.ಕ : ಕರಾವಳಿಗರ ಬಹು ಮುಖ್ಯ ಸಮಸ್ಯೆಯ ಕಥೆಯ ಎಳೆಯನ್ನು ಇಟ್ಟುಕೊಂಡ, ಪ್ರಯೋಗಾತ್ಮಕ ತುಳು ಕಿರು ಚಿತ್ರ ‘ಬಾಯಿಲ್ಡ್ ರೈಸ್’ ಬಿಡುಗಡೆಯಾಗಿ ಒಂದು ವರ್ಷ ಸಮೀಪಿಸುತ್ತಿದ್ದು, ರಾಜ್ಯಮಟ್ಟದಲ್ಲಿ ಹಲವಾರು ಅವಾರ್ಡ್ ಗಳನ್ನು ಪಡೆದು ಇದೀಗ ಆಸ್ಕರ್ ಮಾನ್ಯತೆಯನ್ನು ಪಡೆದಿರುವ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ -2023ಕ್ಕೆ ಆಯ್ಕೆಯಾಗಿದೆ.

2022 ಆ.27 ರಂದು ಮಾಯಿಲು ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ‘ಬಾಯಿಲ್ಡ್ ರೈಸ್’ ಕರಾವಳಿಯಾದ್ಯಂತ ಸದ್ದು ಮಾಡಿದ್ದು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಸಿನಿಮಾ ನಿರ್ದೇಶಕ ಮಂಸೋರೆ, ಬಿ.ಸುರೇಶ್, ಕನ್ನಡ ಚಿತ್ರ ನಿರ್ದೇಶಕಿ ಚಂಪಾಶೆಟ್ಟಿ, ಸೇರಿದಂತೆ ತುಳುನಾಡಿನ ಜನಸಾಮಾನ್ಯರ ಮನಸು ಗೆದ್ದು ಉತ್ತಮ ವಿಮರ್ಶೆಯನ್ನು ಪಡೆದಿದೆ. ಯಾವುದೇ ವೈಭವೀಕರಣವಿಲ್ಲದೆ, ಸಹಜತೆಯಲ್ಲಿ ಕಿರುಚಿತ್ರ ಮೂಡಿ ಬಂದಿದ್ದು, ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ಈಗಲೂ ನಿರಂತರತೆಯನ್ನು ಕಾಯ್ದುಕೊಂಡಿದೆ.

ಜಯಂತ್ ನಿಟ್ಟಡೆಯವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಈ ಕಿರುಚಿತ್ರ ಆ.03ರಿಂದ 13ರವರೆಗೆ ನಡೆಯುವ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ – 2023ರಲ್ಲಿ ಪ್ರದರ್ಶನಗೊಳ್ಳಲಿದೆ. ಜಯಂತ್ ನಿಟ್ಟಡೆ ಹಾಗೂ ಅಭ್ಯುದಯರವರ ಸಾಹಿತ್ಯದಲ್ಲಿ ಮೂಡಿಬಂದ ‘ಸಾದಿ ಊರುನು ತೂನಗ, ಎಂಬ ಕಿರುಚಿತ್ರದ ಹಾಡಿಗೆ ಸಾಯಿರೂಪ ದಾಲಿಂಬ ಅವರು ಧ್ವನಿ ನೀಡಿದ್ದು, ಆ್ಯಂಟೊನಿಯವರ ಸಂಗೀತ ಕೇಳುಗರ ಹೃದಯ ಗೆದ್ದಿತ್ತು.

ಜಯಂತ್ ನಿಟ್ಟಡೆ  ನಿರ್ದೇಶಕ

ಬರೆಯುವ ಕಥೆಯಲ್ಲಿ ಓದುಗರನ್ನು ಕದಲಲು ಬಿಡದೆ ಅಚಾನಕ್ಕಾಗಿ ತಿರುವ ನೀಡುವ, ಬದುಕಿನ ಸೂಕ್ಷ್ಮತೆ, ನೋವು, ಸಂತೋಷ ಎಲ್ಲವನ್ನೂ ಮನಮುಟ್ಟುವಂತೆ ಬರೆಯುವ ಬರಹಗಾರ, ತುಳುನಾಡ ಯುವ ನಿರ್ದೇಶಕ ಜಯಂತ್ ನಿಟ್ಟಡೆಯವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಕಿರುಚಿತ್ರ ‘ಬಾಯಿಲ್ಡ್ ರೈಸ್’. ಕರಾವಳಿಗರ ನೈಜ ಬದುಕನ್ನು ತೆರೆದಿಟ್ಟು, ಪ್ರತೀ ವೀಕ್ಷಕರ ಕಣ್ಣಂಚನ್ನು ಒದ್ದೆಯಾಗಿಸಿ, ಕರಾವಳಿಗರು ಬಳಸುವ ಕುಚ್ಚಲಕ್ಕಿ ಅವರ ಬದುಕಿನಲ್ಲಿ ಹೇಗೆ ಬೆರುತು ಹೋಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತುಳು ಭಾಷೆಯನ್ನು ಅರ್ಥೈಸಿಕೊಳ್ಳಲಾಗದ ಅನೇಕರಿಗೆ ಚಿತ್ರದ ದೃಶ್ಯಗಳೇ ಕಥೆಯನ್ನು ಅರ್ಥ ಮಾಡಿಸಿವೆ. ದಿವ್ಯ.ಎಲ್ ಮೂಡಿಗೆರೆಯವರ ನಿರ್ಮಾಣ ಹಾಗೂ ಆರ್ ಪ್ರದೀಪ್ ಗರ್ಡಾಡಿಯವರ ಸಂಕಲನದಲ್ಲಿರುವ ಈ ಕಿರುಚಿತ್ರ ಬಿಡುಗಡೆಗೂ ಮುನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆಯಲ್ಲಿ ನಡೆದ ರಾಜ್ಯಮಟ್ಟದ B.Voc In Digital Media and Film Making Media Festನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜೊತೆಗೆ ನಿರ್ದೇಶಕ ಜಯಂತ್ ನಿಟ್ಟಡೆಯವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಲಭಿಸಿದೆ‌

ಗಾರ್ಡನ್ ಸಿಟಿ ಯೂನಿವರ್ಸಿಟಿ ಬೆಂಗಳೂರು ಇವರು ನಡೆಸಿದ ಶಾರ್ಟ್ ಫಿಲ್ಮ್ ಫೆಸ್ಟಿವಲ್-2022ರಲ್ಲಿ ಬೆಸ್ಟ್ ಡೈರೆಕ್ಟರ್ ಮತ್ತು ಸ್ಪೆಷಲ್ ಜ್ಯೂರಿ ಅವಾರ್ಡ್ ಪಡೆದುಕೊಂಡಿದೆ. ಬೆಂಗಳೂರಿನ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲೂ ಈ ಕಿರುಚಿತ್ರ ಪ್ರದರ್ಶನಗೊಂಡಿದೆ.

ಜನಾರ್ಧನ ಮೌರ್ಯ (ಛಾಯಾಗ್ರಾಹಕ)

‘ಬಾಯಿಲ್ಡ್ ರೈಸ್’ ಕಿರುಚಿತ್ರದ ಛಾಯಾಗ್ರಾಹಕ ಮೂಲತಃ ಮೈಸೂರಿನ ಜನಾರ್ಧನ ಮೌರ್ಯ. ಪ್ರಶಸ್ತಿ ವಿಜೇತ ‘ದಿ ಬ್ಲೌಸ್’ ಕನ್ನಡ ಕಿರುಚಿತ್ರದ ನಿರ್ದೇಶಕರು ಆಗಿದ್ದಾರೆ.

ಮೇಘಾ.ಕೆ

ಕಿರುಚಿತ್ರದಲ್ಲಿ ರತ್ನ ಎಂಬ ತಾಯಿಯ ಪಾತ್ರಕ್ಕೆ ಜೀವ ತುಂಬಿದ ಕಲಾವಿದೆ ಮೇಘಾ ಕೆ (ಸೌಮ್ಯ). ಶಿಕ್ಷಕಿಯಾಗಿರುವ ಇವರು ಯಾವುದೇ ನಾಟಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯದೇ ಮೊದಲ ಬಾರಿಗೆ ಬಾಯಿಲ್ಡ್ ರೈಸ್ ಕಿರುಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಮನ್ವಿತ್

ಮಗನ ಪಾತ್ರದಲ್ಲಿ ಕಾಣಿಸಿಕೊಂಡ ಕಲಾವಿದ ಮನ್ವಿತ್,  ಇವರು ಬಾಯಿಲ್ಡ್ ರೈಸ್ ಕಿರುಚಿತ್ರದಲ್ಲಿ   ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸುವಂತೆ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಮೊದಲ ಬಾರಿ ಕಿರುಚಿತ್ರದಲ್ಲಿ ನಟಿಸಿದರೂ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ಯೋಗಿನಿ ಮಚ್ಚಿನ

ಸಹಕಲಾವಿದೆಯಾಗಿ  ವಸಂತಿಯ ಪಾತ್ರಕ್ಕೆ ಜೀವ ತುಂಬಿದ ಕಲಾವಿದೆ ಯೋಗಿನಿ ಮಚ್ಚಿನ. ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬೆಂಗಳೂರಿನಲ್ಲಿ ನಟನೆಯ ತರಬೇತಿ ಪಡೆದು 2 ಬಾರಿ ಪ್ರಥಮ ಸ್ಥಾನ ಪಡೆದ ಕೆ.ಪಿ ಲಕ್ಷ್ಮಣ್ ನಿರ್ದೇಶನದ ‘ದಿ ಲೀಡರ್’ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಆಯುಷ್ಮಾನ್, ಶ್ರಾವಣಿ, ಸಾನ್ವಿಯವರು ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರುಚಿತ್ರದ ಯಶಸ್ಸಿಗೆ ಜಯಂತಿ, ಶೇಖರ್ ಮಾಲಾಡಿ, ಪ್ರೇಮ್ ಕುಮಾರ್, ಸಂತೋಷ್ ಬಾಬು, ಪ್ರಶಾಂತ್ ಬೆಳ್ತಂಗಡಿ ಹಾಗೂ ಇನ್ನೂ ಅನೇಕರು ಸಹಕರಿಸಿದ್ದಾರೆ.

error: Content is protected !!