ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಸಸ್ಪೆಂಡ್ ಹಿಂದೆ ಇದೆ ರಾಜಕೀಯ..? ಪ್ರತಿಷ್ಠೆಗಾಗಿ ಸುಳ್ಳು ಮಾಹಿತಿ ನೀಡಿದ್ರ ಅಧಿಕಾರಿಗಳು..! ಸೋಮಂತಡ್ಕ ಮರದ ಕೇಸ್ ತನಿಖಾ ವರದಿಯಲ್ಲಿ ಏನಿದೆ..?

 

 

ಬೆಳ್ತಂಗಡಿ: ಒಂದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ಅಧಿಕಾರಿಯೊಬ್ಬರು ರಾಜಕೀಯವಾಗಿ ಅಮಾನತುಗೊಂಡು ಅದಕ್ಕೆ ಒಂದೇ ದಿನದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ  (ಕೆ ಎ ಟಿ) ಮೂಲಕ  ತಡೆಯಾಜ್ಞೆ  ತಂದು  ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ನಡೆದಿದೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾದ ತ್ಯಾಗರಾಜ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಎಂಬ ಆದೇಶವಾಗುತ್ತದೆ. ಅದರೆ ಈ ಸಸ್ಪೆಂಡ್ ಹಿಂದೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು  ಟಿಂಬರ್ ಮರ್ಚೆಂಟ್ ಗಳ ಮೂಲಕ ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರಿಗೆ ನೀಡಿದ ಸುಳ್ಳು ಮಾಹಿತಿ ಹಾಗೂ ಅವರು  ಬಲವಾದ  ಒತ್ತಡ ಹೇರಿ ರಾತ್ರೊರಾತ್ರಿ ಮಾಡಿಸಿದ ಸಸ್ಪೆಂಡ್  ಆದೇಶ   ಎಂಬ  ಅನುಮಾನ ಮೇಲ್ನೊಟ್ಟಕ್ಕೆ ಕಂಡು  ಬರುತ್ತದೆ. ಯಾಕೆಂದರೆ  ತ್ಯಾಗರಾಜ್ ಅವರು ಕರ್ತವ್ಯಲೋಪ ಎಸಗಿಲ್ಲ ಎಂಬುವುದರ ಬಗ್ಗೆ ಸ್ವತಃ  ಅರಣ್ಯ ಇಲಾಖೆಯೇ  ನಡೆಸಿದ ತನಿಖಾ ವರದಿಯು ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಲಭ್ಯವಾಗಿದೆ.

 

 

ಸುಬ್ರಹ್ಮಣ್ಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ತ್ಯಾಗರಾಜ್ ಅವರು ಕಳೆದ ಮೂರು ವರುಷಗಳ ಹಿಂದೆ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ.ಸೋಮಂತಡ್ಕ ಬಳಿ ಅಕ್ರಮ ಮರ ಸಾಗಾಟದ ಬಗ್ಗೆ ಬಂದ್ದ ದೂರಿನಂತೆ ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದರು. ಅದರೆ ಇದನ್ನೇ ಅಸ್ತ್ರವಾಗಿರಿಸಿಕೊಂಡು ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ಟಿಂಬರ್ ಮರ್ಚಂಟ್ ಗಳು ವಲಯ ಅರಣ್ಯಾಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಲ್ಲದೇ ಆರೋಪಿಗಳನ್ನು ರಕ್ಷಿಸಿದ್ದಾರೆ ಎಂದು  ರಾಜಕೀಯ ನಾಯಕರೊಬ್ಬರಿಗೆ ತಿಳಿಸಿದ್ದಲ್ಲದೇ ಶಾಸಕರ ಆಪ್ತರೊಬ್ಬರು ಸಾಗಿಸುತಿದ್ದ ಅಕ್ರಮ ಮರದ ಲಾರಿಯನ್ನು ತ್ಯಾಗರಾಜ್ ಬಿಟ್ಟುಬಿಟ್ಟಿದ್ದಾರೆ .ಎಂಬ ಸುಳ್ಳು ಮಾಹಿತಿಯನ್ನು ಅವರಿಗೆ ತಿಳಿಸಿದ್ದಾರೆ.

 

 

 

ಈ ಬಗ್ಗೆ ಅವರು ಯಾವುದನ್ನೂ ಪರಿಶೀಲಿಸದೇ ವಲಯ ಅರಣ್ಯಾಧಿಕಾರಿ ವಿರುದ್ಧ ಅಸಾಮಾಧಾನಗೊಂಡಿದ್ದಾರೆ. ಅದರೆ ಅದಾಗಲೇ ತ್ಯಾಗರಾಜ್ ಕರ್ತವ್ಯ ಲೋಪ ಎಸಗಿಲ್ಲ ಎಂಬುವುದಕ್ಕೆ ತನಿಖಾ ವರದಿ ಈ ರೀತಿ ಇದ್ದು

ಡಿ.05, 2021 ರಂದು ರಾತ್ರಿ ಮುಂಡಾಜೆ ಗ್ರಾಮದ ಕಜೆಮೂಲಾರು – ಕಾಯರ್ತೋಡಿ ರಸ್ತೆಯಲ್ಲಿ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರಿಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆ ಸಂಬಂಧಪಟ್ಟ ಶಾಖಾ ಸಿಬ್ಬಂದಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ಕರೆ ಸಿಗದ ಕಾರಣ ರಾತ್ರಿ ಗಸ್ತು ತಂಡದವರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ. ಅದರಂತೆ ರಾತ್ರಿ ಗಸ್ತು ತಂಡದವರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಣ್ಣು ಮರದ 19 ದಿಮ್ಮಿ ಹಾಗೂ ತೋಪನ್ನು ಲಾರಿ ಸಮೇತ ಹಿಡಿದು ವಶ ಪಡಿಸಿಕೊಂಡು ಮರುದಿನವೇ ಕ್ಷೇತ್ರ ವ್ಯಾಪ್ತಿಯ ಉಪ ವಲಯ ಅರಣ್ಯಾಧಿಕಾರಿಯವರಿಗೆ ಜ್ಞಾಪನಾ ಪತ್ರ ನೀಡಿ ಸಾಗಾಟ ಮಾಡುತ್ತಿದ್ದ ಸೊತ್ತುಗಳನ್ನು ಯಾವ ಸ್ಥಳದಿಂದ ಕಡಿಯಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಉಜಿರೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿಯವರು ಸ್ಥಳದಲ್ಲಿ ಕಡಿತಲೆಯಾದುದಕ್ಕಿಂತ ಕಡಿಮೆ ಪ್ರಮಾಣದ ಸೊತ್ತು/ಕುತ್ತಿಗಳು ಸ್ಥಳದಲ್ಲಿ ಇರುವುದಾಗಿ ವರದಿ ಮಾಡಿದ್ದು ಡಿ.09ರಂದು ಬೆಳ್ತಂಗಡಿ ವಲಯ ಅರಣ್ಯ ಕಛೇರಿಯ ಮೆಮೋ ರೀಡಿಂಗ್‌ಗಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತರವರು ಆಗಮಿಸಿ ಮೆಮೋ ರೀಡಿಂಗ್ ಮುಗಿದ ನಂತರದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಕ್ಷೀರು  ನಡೆದ ಸ್ಥಳವಾದ ಮುಂಡಾಜೆ ಗ್ರಾಮದ ಕಜೆ ಎಂಬಲ್ಲಿಗೆ ಬಂದು ಸ್ಥಳದಲ್ಲಿ ಹೆಚ್ಚಿನ ಮರದ ದಿಮ್ಮಿಗಳು ಮತ್ತು ಕಟ್ಟಿಗೆ ರಾಶಿ ಬಿದ್ದಿರುವುದನ್ನು ಪರಿಶೀಲಿಸಿದ್ದಾರೆ. ಆದರೆ ಶಾಖಾ ಉಪವಲಯ ಅರಣ್ಯಾಧಿಕಾರಿಯವರ ವರದಿಯಲ್ಲಿ ವಶಪಡಿಸಿಕೊಂಡ ಸೊತ್ತಿಗೂ, ಹಾಗೂ ಸ್ಥಳದಲ್ಲಿ  ಇರಿಸಿದ ಇತರೆ ಸೊತ್ತಿಗೂ ವ್ಯತ್ಯಾಸವಿರುವುದು ಕಂಡುಬಂದಿದೆ.

 

 

ಉಜಿರೆ ಶಾಖಾ ಉಪವಲಯ ಅರಣ್ಯಾಧಿಕಾರಿಯವರು ಈ ತಕ್ಷೀರಿನ ಸಂಬಂಧ ಕಾನೂನಾತ್ಮಕವಾಗಿ ಕ್ರಮ ವಹಿಸದ ಕಾರಣ ವಲಯದ ವಲಯ ಅರಣ್ಯ ಅಧಿಕಾರಿಯವರು ವಲಯದ ಇತರ ಶಾಖಾ ಉಪ ವಲಯ ಅರಣ್ಯಾಧಿಕಾರಿ / ಅರಣ್ಯ ರಕ್ಷಕರನ್ನು ಸದ್ದಿತಕ್ಷೀರು ನಡೆದ ಸ್ಥಳಕ್ಕೆ ಬರಮಾಡಿಸಿಕೊಂಡು ಸ್ಥಳದಲ್ಲಿರುವ ಎಲ್ಲಾ ಸೊತ್ತುಗಳನ್ನು ಅಮಾನತು ಪಡಿಸಿ ತಕ್ಷೀರು ದಾಖಲಿಸಿ ಪ್ರಥಮ ಮಾಹಿತಿ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಬಳಿಕ ಸ್ಥಳದಲ್ಲಿ ವಿವಿಧ ಜಾತಿಯ 84 ಮರಗಳನ್ನು ಕಡಿದಿರುವುದನ್ನು ಪತ್ತೆ ಹಚ್ಚಿದ್ದಲ್ಲದೇ 179 ದಿಮ್ಮಿ, ಮೋಪು ಮತ್ತು 40 ಘ.ಮೀ. ಕಟ್ಟಿಗೆ ಅಮಾನತು ಪಡಿಸಲಾಗಿದ್ದು, ಆಪಾದಿತನಾದ ಕಲ್ಮಂಜ ಗ್ರಾಮದ ಐತ ಕೊರಗರವರ ಮನೆಯಲ್ಲಿ ಬಚ್ಚಿಟ್ಟಿದ್ದ ಹೆಬ್ಬಲಸು ಮರದ ದಿಮ್ಮಿ, ಮೋಪು ಮತ್ತು ದಿಮ್ಮಿಗಳ ಕೆಳಭಾಗದಲ್ಲಿ ಹಾಗೂ ಪೊದೆಗಿಡಗಳ ಒಳಗಡೆ ಇದ್ದಂತಹ ಸುಮಾರು 7 ಘ.ಮೀ ಕಟ್ಟಿಗೆಯನ್ನು ವಶಪಡಿಸಿದ್ದಾರೆ. ಈ ಎಲ್ಲಾ ಸೊತ್ತುಗಳನ್ನು ಭದ್ರತಾ ದೃಷ್ಟಿಯಿಂದ ಮಣ್ಣಗುಂಡಿ ಡಿಪೋಗೆ ಸಾಗಾಟ ಮಾಡಲಾಗಿತ್ತು. ಆದರೆ ತಪಾಸಣೆ ನಡೆದ ಸ್ಥಳವು ಮೇಲ್ನೋಟಕ್ಕೆ ಆಪಾದಿತ ವ್ಯಕ್ತಿ ಐತ ಕೊರಗರವರಿಗೆ ಮಂಜೂರಾದ ಸ್ಥಳ ಎಂಬಂತೆ ಕಂಡುಬಂದಿದ್ದು, ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರರಿಗೆ ಪತ್ರ ಬರೆದು ಮರ ಕಡಿದ ಸ್ಥಳದ ಸರ್ವೆ ನಕಾಶೆಯನ್ನು ಒದಗಿಸುವಂತೆ ಕೋರಲಾಗಿತ್ತು.

ತ್ಯಾಗರಾಜ್ ಹೆಚ್.ಎಸ್ ಅವರು ಡಿ.01ರಿಂದ 10ರ ವರೆಗೆ ಚುನಾವಣೆಯ ಕರ್ತವ್ಯ ನಿರ್ವಹಿಸಿಸುತ್ತಿರುವ ಸಂದರ್ಭದಲ್ಲಿ ಹಾಗೂ ಸರ್ಕಾರಿ ಕರ್ತವ್ಯದ ಮೇಲೆ ಉಚ್ಚ ನ್ಯಾಯಾಲಯಕ್ಕೆ ತೆರಳಿದ ಸಮಯದಲ್ಲಿ ಈ ಘಟನೆಗಳು ನಡೆದಿದ್ದು ಇಂತಹ ಸಂದರ್ಭದಲ್ಲೂ ಅಕ್ರಮ ಮರ ಸಾಗಾಟ ತಡೆದು, ಮೌಲ್ಯಯುತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಯವರು ತಮ್ಮ ಸರ್ಕಾರಿ ಕರ್ತವ್ಯವನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಿದ್ದು, ವಲಯ ಅರಣ್ಯ ಅಧಿಕಾರಿ, ಬೆಳ್ತಂಗಡಿ ರವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸುವುದನ್ನು ಕೈಬಿಡುವಂತೆ ವರದಿಯನ್ನು ನೀಡಿದ್ದಾರೆ. ಅದರೆ ಇದನ್ನೆಲ್ಲ ಪರಿಶೀಲಿಸದೇ ರಾಜಕೀಯ ಪ್ರಭಾವ ಬಳಸಿ ಸಸ್ಪೆಂಡ್ ಮಾಡಿಸಿದ್ದಾರೆ. ಅದರೆ  ಸಸ್ಪೆಂಡ್ ರದ್ದುಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರತಿಷ್ಠೆಗಾಗಿ ಏನೂ ಮಾಡಲು ಹೇಸದ ಅಧಿಕಾರಿಗಳು ಒಂದೆಡೆಯಾದರೆ, ರಾಜಕೀಯ ಲಾಭಕ್ಕಾಗಿ ಪೂರ್ವಪರ ಯೋಚಿಸದೇ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ರಾಜಕಾರಣಿಗಳು  ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆ ಇದೆ.

error: Content is protected !!