ಬೆಳಗಾವಿ : ದಿಗಂಬರ ಜೈನ ಮುನಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಹೇಳಿದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ರಾಯಭಾಗ ತಾಲೂಕು ಕಟಕಬಾವಿ ಗ್ರಾಮದ ನಿವಾಸಿ ನಾರಾಯಣ ಮಾಳಿ ಹಾಗೂ ಚಿಕ್ಕೋಡಿ ಪಟ್ಟಣದ ನಿವಾಸಿ ಆಗಿರುವ ಹಾಸನ್ ದಲಾಯಿ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ,ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.ಹಿರೇಕೋಡಿಯ ನಂದಿ ಪರ್ವತ ಜೈನ ಆಶ್ರಮದ ಜೈನ ಮುನಿಗಳು ನಾಪತ್ತೆಯಾಗಿರುವ ಬಗ್ಗೆ ಜು7 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಆಶ್ರಮದ ಟ್ರಸ್ಟ್ ಸದಸ್ಯರು, ಜೈನ ಸಮಾಜದ ಶ್ರಾವಕರು ದೂರು ದಾಖಲಿಸಿದ್ದರು. ಜೈನ ಶ್ರಾವಕರ ದೂರಿನ ಮೇರೆಗೆ ತನಿಖೆ ಕೈಗೊಂಡು ಬುಧವಾರ ಹಾಗೂ ಹಿಂದಿನ ದಿನಗಳ ಘಟನಾವಳಿಗಳನ್ನು ಪರಿಶೀಲಿಸಿ ತನಿಖೆ ಪ್ರಾರಂಭಿಸಿದೆವು. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಯಿತು. ತಕ್ಷಣವೇ ಸ್ವಾಮೀಜಿ ಅವರ ಜೊತೆ ಗುರುತಿಸಿಕೊಂಡಿದ್ದ ಒಬ್ಬನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದೆವು, ಆಗ ಸ್ವಾಮೀಜಿ ಅವರ ಕೊಲೆ ಆಗಿರುವುದು ಬೆಳಕಿಗೆ ಬಂದಿತು ಎಂದು ವಿವರಿಸಿದರು.
9 ಭಾಗಗಳನ್ನಾಗಿ ಕತ್ತರಿಸಿದ್ದ ಆರೋಪಿಗಳು:
ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹದ 9 ಭಾಗಗಳನ್ನಾಗಿ ತುಂಡು ಮಾಡಲಾಗಿದೆ. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆ ಪ್ರತ್ಯೇಕವಾಗಿ ಕತ್ತರಿಸಿರುವ ಕ್ರೂರಿಗಳು ಜೈನಮುನಿಗಳ ಹತ್ಯೆ ಮಾಡಿ ಮೃತದೇಹ ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿದ್ದರು. ಆರೋಪಿಗಳು ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ ಬಳಿಕ ನುರಿತ ತಂಡದೊಂದಿಗೆ ರಾಯಭಾಗ ತಾಲೂಕಿನ ಕಟಕಬಾವಿ ಗ್ರಾಮದ ಕೊಳವೆ ಬಾವಿಯಿಂದ ಜೈನ್ ಮುನಿಗಳ ಶವನ್ನು ಹೊರಕ್ಕೆ ತೆಗೆಯಲಾಯಿತು. 30 ಅಡಿ ಆಳದಲ್ಲಿ ನಮಗೆ ಶ್ರೀಗಳ ಮೃತದೇಹ ಪತ್ತೆಯಾಗಿದೆ, ಶ್ರೀಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಪ್ರಕರಣದ ಮಾಹಿತಿ ನೀಡಿದರು.