‘2023-24ನೇ ಸಾಲಿನ ಮುಂಗಡ ಪತ್ರ ನೀರಸ: ಪಠ್ಯಪುಸ್ತಕದ ವಿಷಯದಲ್ಲಿ ನೈಜ ಇತಿಹಾಸ ತಿರುಚುವ ಕೆಲಸ ನಡೆದಿದೆ: ಕರ್ನಾಟಕಕ್ಕೆ ಕಾಂಗ್ರೆಸ್ ಮುಂಗಡ ಪತ್ರ ಭಾರವಾಗಿದೆ’: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಮಂಡಿಸಿದ 2023-24ನೇ ಸಾಲಿನ ಬಜೆಟ್ ಕರ್ನಾಟಕಕ್ಕೆ ಭಾರವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಬಜೆಟ್ ಮಂಡನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ರಾಜ್ಯ ಬಜೆಟ್ ನೀರಸವಾಗಿತ್ತು. ಅಲ್ಲದೆ ಹಿಂದಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವ ರಾಜಕೀಯ ಭಾಷಣದಂತಿತ್ತು. ಇದರಿಂದ ಆರ್ಥಿಕ ಶಿಸ್ತಿನ ಹಳಿ ತಪ್ಪಿ ಅಭಿವೃದ್ಧಿ ಕುಂಠಿತವಾಗಿ ನಾಡಿನ ಜನತೆಗೆ ಬಲುದೊಡ್ಡ ಹೊರೆಯಾಗಲಿದೆ ಎಂದಿದ್ದಾರೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿ ಭಾಗ್ಯಗಳ ಮೇಲೆ ರಾಜ್ಯದ ಜನತೆ ಅಪಾರ ನೀರಿಕ್ಷೆಯೊಂದಿಗೆ ಕಾಯುತ್ತಿದ್ದು, ಇವುಗಳನ್ನು ಮುಂಗೈಗೆ ಬೆಲ್ಲ ಮುಟ್ಟಿಸಿದಂತೆ ಘೋಷಿಸಿ ಹೆಚ್ಚಿನ ಫಲಾನುಭವಿಗಳನ್ನು ಹೊರಗಿಡುವ ಯತ್ನ ನಡೆಸಿ ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಸರ್ಕಾರವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಎಂದು ಟೀಕಿಸಿದ್ದಾರೆ.

ಪಠ್ಯಪುಸ್ತಕದ ವಿಷಯದಲ್ಲಿ ನೈಜ ಇತಿಹಾಸ ತಿರುಚುವ ಕೆಲಸ ನಡೆದಿದೆ. ವಿದ್ಯುತ್ ಹೆಚ್ಚಳದಿಂದ ತತ್ತರಿಸಿದ ಕೈಗಾರಿಕಾ ವಲಯಕ್ಕೆ ಯಾವುದೇ ಉತ್ತೇಜನ ದೊರಕದಿರುವುದರಿಂದ ಉತ್ಪಾದನೆ ಕುಸಿದು, ನಿರುದ್ಯೋಗ ಪ್ರಮಾಣ ಹೆಚ್ಚಾಗಿ, ಬೆಲೆಯೇರಿಕೆಯ ಭೀತಿ ಉಂಟಾಗಿದೆ. ಮೋಟಾರು ವಾಹನ ತೆರಿಗೆ ಏರಿಕೆಯಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆಯುಂಟಾಗಿ ಯುವಜನತೆಯ ದೈನಂದಿನ ಚಟುವಟಿಕೆ ಕುಂಠಿತಗೊಳ್ಳಲಿದೆ. ಎ.ಪಿ.ಎಂ.ಸಿ ಕಾಯಿದೆ ತಿದ್ದುಪಡಿ ಹಿಂತೆಗೆತದಿಂದ ಕೃಷಿ ವಲಯಕ್ಕೆ ಮಾರಕವಾಗಲಿದೆ. ಅಡಿಕೆ ತೋಟಕ್ಕೆ ಮಾರಕವಾಗಿರುವ ಎಲೆಚುಕ್ಕಿ ರೋಗಕ್ಕೆ ಸೂಕ್ತ ಪರಿಹಾರ ಹಾಗೂ ಸಂಶೋಧನೆಗೆ ನಿಧಿ ಕಾಯ್ದಿರಿಸದೆ ರೈತಾಪಿ ವರ್ಗಕ್ಕೆ ನಿರಾಸೆಯಾಗಿದೆ. ನೀರಾವರಿ ಕ್ಷೇತ್ರಕ್ಕೂ ಯಾವುದೇ ಕೊಡುಗೆ ನೀಡದೆ ತಾರತಮ್ಯವೆಸಗಲಾಗಿದೆ. ಜಿಲ್ಲೆಯ ಮೀನುಗಾರಿಕೆ ವಲಯಕ್ಕೂ ಅನ್ಯಾಯವಾಗಿದೆ ಎಂದಿದ್ದಾರೆ.

error: Content is protected !!