ರಾಜ್ಯ ಬಜೆಟ್ 2023-24: ರಾಷ್ಟ್ರೀಯ ಶಿಕ್ಷಣ ನೀತಿಗೆ ಕೊಕ್, ಹೊಸ ಶಿಕ್ಷಣ ನೀತಿಗೆ ಯೋಜನೆ: 10 ನೇ ತರಗತಿಗೂ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣು ವಿತರಣೆ : ಕಲಿಕಾ ನ್ಯೂನತೆ ಸರಿಪಡಿಸಲು ‘ಮರುಸಿಂಚನ’ ಯೋಜನೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡಿಸಿದ್ದು,ರಾಷ್ಟ್ರೀಯ ಶಿಕ್ಷಣ ನೀತಿಗೆ ಕೊಕ್ ನೀಡಿ ಹೊಸ ಶಿಕ್ಷಣ ನೀತಿಗೆ ಯೋಜನೆ ರೂಪಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಂತಹ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ. ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು. ಕಲಿಕಾ ನ್ಯೂನತೆ ಸರಿಪಡಿಸಲು ಮರುಸಿಂಚನ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿಗೆ ಅನುಸಾರವಾಗಿ ಶಾಲಾ ಕಾಲೇಜುಗಳಿಗೆ 8311 ಕೊಠಡಿ ನಿರ್ಮಾಣಕ್ಕೆ 550 ಕೋಟಿ ರೂಪಾಯಿ ಅನುದಾನ, 5775 ಶಾಲೆ, 150 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 200 ಕೋಟಿ ರೂಪಾಯಿ, 3833 ಶಾಲೆ 724 ಪದವಿ ಪೂರ್ವ ಕಾಲೇಜು ಕಠಡಿ ದುರಸ್ತಿಗೆ 100 ಕೋಟಿ ರೂಪಾಯಿ, 47272 ಶಾಲೆಗಳು, 1231 ಪಿಯು ಕಾಲೇಜುಗಳ ನಿರ್ವಹಣೆಗೆ 153 ಕೋಟಿ ಅನುದಾನ ನೀಡಲು ಯೋಜನೆ ರೂಪಿಸಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ ಶೇಂಗಾ ಚಿಕ್ಕಿ/ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂ.ಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು ಎಂದಿದ್ದಾರೆ.

ಮಾಧ್ಯಮಿಕ ಮತ್ತು ಪಿಯು ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್ ನಿರ್ಮಾಣಕ್ಕೆ 2 ಕೋಟಿ ರೂಪಾಯಿ, ಅನುದಾನ ಶಾಲೆಯ ಸುತ್ತಮುತ್ತ ಗಿಡ ನೆಡಲು ಸಸ್ಯ ಶಾಮಲ ಕಾರ್ಯಕ್ರಮ, ರಾಷ್ಟ್ರೀಯ ಶಿಕ್ಷಣ ನೀತಿ ಬದಲು ಸ್ಥಳೀಯವಾದ ಸಾಮಾಜಿಕ, ಸಾಂಸ್ಥಿಕ ಮತ್ತು ಆರ್ಥಿಕ ವಾಸ್ತವಾಂಶಗಳ ಒಳಗೊಂಡ ಹೊಸ ಶಿಕ್ಷಣ ನೀತಿ ಜಾರಿ, ನಕಲಿ ಅಂಕಪಟ್ಟಿ ತಡೆಗೆ ಡಿಜಿಲಾಕರ್ ಪ್ರಮಾಣ ಪತ್ರ ವ್ಯವಸ್ಥೆ, ಅತ್ಯುತ್ತಮ ಸಾಧನೆ ಮಾಡುವ ವಿವಿಗಳಿಗೆ 50 ಲಕ್ಷ ಪ್ರೋತ್ಸಾಹಧನ, ಎಲ್ಲ ವಿವಿಗಳಲ್ಲಿ ಪಿಹೆಚ್‌ಡಿ ಸೀಟು ಭರ್ತಿಗೆ ಏಕರೂಪತೆ ಜಾರಿಗೊಳಿಸಲಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ಸ್ ತಂತ್ರಾಂಶವನ್ನು ಎಸ್ ಎ ಟಿ ಎಸ್ 2.0 ಎಂದು ಉನ್ನತೀಕರಿಸಲಿದೆ. ರಾಜ್ಯದ ಸಾಹಿತಿಗಳ ಹಾಗೂ ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಿದೆ.

ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳನ್ನು ಹಾಗೂ ಪಠ್ಯ ವಿಷಯಗಳನ್ನು ಭಾಷಾಂತರಿಸಲು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.

error: Content is protected !!