ಫೆ 22 ರಿಂದ ಮಾ01 ರವರೆಗೆ ವೇಣೂರು ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ:

 

 

 

ವೇಣೂರು:  2024ರ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ನೆರವೇರಲಿದ್ದು ಶ್ರಾವಕರ ಮನಸ್ಸಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಸಂಭ್ರಮದಿಂದ ನೆರವೇರಿಸುವೆವು ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಅಧ್ಯಕ್ಷರು ಆದ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.ಅವರು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜೂನ್ 24ರಂದು ನಡೆದ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ  ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆ ಮತ್ತು   ಶ್ರಾವಕರ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.9 ದಿನಗಳ ಕಾಲ ನಡೆಯುವ ಈ ಮಹಾಮಜ್ಜನದಲ್ಲಿ ಯುವ ಸಮುದಾಯ ಭಾಗವಹಿಸಿ ತಮ್ಮ ಕೊಡುಗೆ ನೀಡಬೇಕು. ಹಿಂದೆ ಭೂ ಮಸೂದೆ ಕಾಯ್ದೆ ಬಂದಾಗ ಆರ್ಥಿಕವಾಗಿ ಸಮರ್ಥರಾಗಿರಲಿಲ್ಲ. ಆದರೆ ಇಂದು ಜೈನಸಮುದಾಯ ಸಶಕ್ತವಾಗಿದೆ. ತನು, ಮನ, ಧನದಿಂದ ಸಹಕರಿಸುವ ಮೂಲಕ ಕೇವಲ ಮಹಾ ಮಸ್ತಕಾಭಿಷೇಕ ಎಂಬ ಭಾವನೆಯಲ್ಲದೆ ಜನಮಂಗಲ ಕಾರ್ಯವಾಗಬೇಕು ಎಂದು ಸಂದೇಶ ನೀಡಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ಅಹಿಂಸಾ ಪರಮೋ ಧರ್ಮ ಎಂದು ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ್ದು ಸಮಾಜ ಜೈನ ಸಮಾಜ. ಜೈನ ಸಮುದಾಯ ಕೃಷಿಯಿಂದ ವ್ಯಾಪಾರದತ್ತ ಒಲವು ತೋರಿದ್ದರಿಂದ ಯುವಪೀಳಿಗೆಯಲ್ಲಿ ಮಹಾಮಸ್ತಕಾಭಿಷೇಕದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪೂಜ್ಯ ಹೆಗ್ಗಡೆಯವರ ಪ್ರೇರಣೆ ಮಹತ್ವದ್ದಾಗಿದ್ದು, ಮಹಾಮಸ್ತಕಾಭಿಷೇಕ ಮೂಲಕ ಜೈನ ಸಮುದಾಯದ ಸಂಪ್ರದಾಯವನ್ನು ಪ್ರಪಂಚಕ್ಕೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಉಪಾಧ್ಯಕ್ಷ, ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು ಪ್ರಾಸ್ತಾವಿಸಿದರು. ಖ್ಯಾತ ನ್ಯಾಯವಾದಿ, ಕಾರ್ಕಳ ಜೈನ ಧರ್ಮ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯಕುಮಾರ್ ಸಲಹೆ ನೀಡಿ ಶುಭಹಾರೈಸಿದರು.ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ-2024 ರ ಅಧ್ಯಕ್ಷರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯಾಧ್ಯಕ್ಷರಾಗಿ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು, ಪ್ರಧಾನ ಕಾರ್ಯದರ್ಶಿಯಾಗಿ ವಿ. ಪ್ರವೀಣ್ ಕುಮಾರ್ ಇಂದ್ರರು, ಸರಕಾರಿ ಸಂಪರ್ಕ ಸಮಿತಿ ಸಂಚಾಲಕರಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇಮಕವಾಗಿದ್ದು ಉಳಿದಂತೆ 26 ಉಪಸಮಿತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.

error: Content is protected !!