ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡಿದೆ. ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿಗಿಂತ ಕರಾವಳಿಯಲ್ಲಿ ಮುಂಗಾರು ಇನ್ನಷ್ಟು ಬಿರುಸುಗೊಂಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್ 24ರಿಂದ 28ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬೀದರ್, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗುವ ಸಂಭವವಿದ್ದು, ಜೂನ್ 27 ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ನೀಡಿದೆ. ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಆಗಮಿಸಿರುವ ಮುಂಗಾರು ಜೂನ್ 18ರವರೆಗೆ ದುರ್ಬಲಗೊಂಡಿತ್ತು. ಇದರಿಂದಾಗಿ ಪ್ರಸಕ್ತ ತಿಂಗಳಲ್ಲಿ ಹೇಳಿಕೊಳುವಷ್ಟೂ ಮಳೆ ಬಿದ್ದಿಲ್ಲ. ಕೆಲವೆಡೆ ಮಾತ್ರ ಒಂದೆರೆಡು ದಿನಗಳು ಜೋರಾಗಿ ಬಿದ್ದರೆ, ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಿತ್ತು. ಈಗ ಮುಂಗಾರು ಇನ್ನಷ್ಟು ಚುರುಕುಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಬಿಪೊರ್‌ಜಾಯ್ ಚಂಡಮಾರುತವು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿದ್ದು ದುರ್ಬಲಗೊಂಡಿದ್ದ ಮುಂಗಾರು ಮಾರುತಗಳು ಈಗ ರಾಜ್ಯಾದ್ಯಂತ ಆವರಿಸುತ್ತಿವೆ. ಕಳೆದ ಎರಡು ದಿನಗಳಿಂದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರುತಗಳು ತುಸು ಪ್ರಬಲಗೊಂಡಿದ್ದು ಮೋಡ ಕವಿದ ವಾತಾವರಣದೊಂದಿಗೆ ಅಗಾಗ್ಗೆ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿಗೂ ಮಾರುತಗಳು ಪ್ರವೇಶಿಸಿವೆ.
ಈ ಹಿಂದೆಯೇ ಜೂನ್ 25ರಿಂದ ಈ ಭಾಗದಲ್ಲಿ ಜೋರಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರಿನಲ್ಲಿ ಜೂನ್ 22ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 23ರಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿತ್ತು.
ಕೊಡಗಿಗೆ ಎನ್‌ಡಿಆರ್‌ಎಫ್ ಆಗಮನ :
ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಅಪಾರ ಮಳೆಯಿಂದಾದ ಅನಾಹುತಗಳು ಒಂದೆರಡಲ್ಲ. ಭಾರಿ ಭೂ ಕುಸಿತ, ಪ್ರವಾಹದಿಂದಾಗಿ 20ಕ್ಕೂ ಅಧಿಕ ಜೀವ ಹಾನಿ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ನಾಮಾವಶೇಷವಾಗಿದೆ. 1,000ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ. ಇದೀಗ ಮತ್ತೆ ಮಳೆಗಾಲ ಎದುರಾಗಿರುವುದರಿಂದ ಸಂಭಾವ್ಯ ಅಪಾಯ ಎದುರಿಸಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್‌ಡಿಆರ್‌ಎಫ್ ತಂಡ ಜೂನ್ 21ರಂದು ಜಿಲ್ಲೆಗೆ ಆಗಮಿಸಿದೆ.
ಕೊಡಗು ಜಿಲ್ಲೆ ಎತ್ತರ ಹಾಗೂ ತಗ್ಗು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಪ್ರವಾಹ, ಭೂಕುಸಿತ ಎದುರಾದಾಗ ಜನರನ್ನು ರಕ್ಷಿಸಲು ಬೇಕಾದ ಬೋಟ್, ಓಪಿ, ಸ್ಟ್ರೆಚರ್ ಸೇರಿದಂತೆ ವಿವಿಧ ಸಾಧನಗಳನ್ನು ಎನ್‌ಡಿಆರ್‌ಎಫ್ ಸಿದ್ದಪಡಿಸಿಕೊಂಡಿದೆ. ಸಾಕಷ್ಟು ಕಡೆಗಳಲ್ಲಿನ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ನುರಿತರು ತಂಡದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಹದ ಸ್ಥಿತಿ ನಿಭಾಯಿಸಿ, ಇಲ್ಲಿನ ಪ್ರಾಕೃತಿಕ ಸ್ಥಿತಿಗತಿ ತಿಳಿದಿರುವ ಸಿಬ್ಬಂದಿಯನ್ನು ಮತ್ತೆ ಜಿಲ್ಲೆಗೆ ಕರೆಸಲಾಗಿದೆ.