ಬೆಳ್ತಂಗಡಿ : ತಾಲೂಕನ್ನೆ ಬೆಚ್ಚಿಬೀಳಿಸಿ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದ್ದ ಉಜಿರೆ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ (17) ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜೂ.16) ಸಿಬಿಐ ಕೋರ್ಟ್‌ನಲ್ಲಿ ತೀರ್ಪು ಪ್ರಕಟವಾಗಲಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಮತ್ತು ಕುಸುಮವತಿ ದಂಪತಿಗಳ ಎರಡನೇ ಮಗಳು ಸೌಜನ್ಯ (17) ಕಾಲೇಜ್ ಮುಗಿಸಿ ಮನೆಗೆ ವಾಪಸ್ ಹೋಗುವಾಗ ಅತ್ಯಾಚಾರವಾಗಿ 2012 ಅಕ್ಟೋಬರ್ 10ರಂದು ಮೃತದೇಹವಾಗಿ ಪತ್ತೆಯಾಗಿದ್ದಳು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಂತೋಷ್ ರಾವ್‌ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಊರಿನಲ್ಲಿದ್ದ. ಹಲವಾರು ಹೋರಾಟ ನಡೆದ ಬಳಿಕ ಪ್ರಕರಣವನ್ನು ಸಿಐಡಿಯಿಂದ ಕೇಂದ್ರ ಸಿಬಿಐ ತನಿಖೆ ನಡೆಸಿದ್ದು ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿತ್ತು.
ಆರೋಪಿ ಸಂತೋಷ್ ರಾವ್ ಬೆಂಗಳೂರು ಸಿಬಿಐ ಕೋರ್ಟ್‌ಗೆ ಕಳೆದ 6 ಬಾರಿಗೂ ಹೆಚ್ಚು ಹಾಜರಾಗದೆ ತಲೆಮರೆಸಿಕೊಂಡಿದ್ದ. ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ನೀಡಿದ್ದು ಅದರಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಹೀಗಾಗಿ ಪ್ರಕರಣ ನಡೆದು 11 ವರ್ಷಗಳ ಬಳಿಕ ಇಂದು ಸಂಜೆ ಪ್ರಕರಣದ ತೀರ್ಪು ಪ್ರಕಟವಾಗಲಿದೆ.