ಶ್ರಮದಾನದ ಮೂಲಕ ರಸ್ತೆ ಬದಿ ಸ್ವಚ್ಛತೆ: ಸಾಂಕ್ರಾಮಿಕ ರೋಗಗಳಿಗೆ ತಡೆ: ಲಾಯಿಲ ಯುವಕರಿಂದ ಮಾದರಿ ಕಾರ್ಯಕ್ರಮ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಜೂ 11 ಲಾಯಿಲ ಯುವಕರಿಂದ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆದಿದೆ.

ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಯಿಂದ ದರ್ಪಿಂಜದಿಂದ ನಿನ್ನಿಕಲ್ಲು , ಪಡ್ಲಾಡಿ ಶಾಲೆಯ ತನಕ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಮಳೆಗಾಲ ಪ್ರಾರಂಭದ ಸಮಯದಲ್ಲಿ ವಾರ್ಡಿನ ಪ್ರಮುಖ ರಸ್ತೆಗಳ ಬದಿಗಳಲ್ಲಿ ಪ್ಲಾಸ್ಟಿಕ್, ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ಸ್ವಚ್ಚ ಮಾಡುವ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಜನರ ಸಹಕಾರದಲ್ಲಿ ನಡೆಸಲಾಗುತ್ತಿದೆ. ಮಳೆ ಪ್ರಾರಂಭದ ದಿನಗಳಲ್ಲಿ ಸ್ವಚ್ಚತಾ ಕೆಲಸ ಮಾಡುತ್ತಿರುವುದರಿಂದ ಮಲೇರಿಯಾ , ಡೆಂಗ್ಯೂ, ನಂತಹ ಸಾಂಕ್ರಾಮಿಕ ರೋಗ ಹರಡುವುದು ಕಡಿಮೆಯಾಗಲಿದೆ. ಅದೇ ರೀತಿ ನಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳುವುದರಿಂದ ಆರೋಗ್ಯವಂತವಾಗಿರಲು ಸಾಧ್ಯ ಇದೆ. ಈ ರೀತಿಯ ಮಾದರಿ ಕಾರ್ಯಕ್ರಮಗಳನ್ನು ಎಲ್ಲ ಪಂಚಾಯತ್‌ಗಳಲ್ಲಿ ಅನುಷ್ಠಾನ ಮಾಡಿದ್ದಲ್ಲಿ ಸ್ವಚ್ಛ ಪರಿಸರ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಅದೇ ರೀತಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡದೇ ನಿರ್ದಿಷ್ಟ ಸ್ಥಳದಲ್ಲಿಯೇ ಕಸ ವಿಲೇವಾರಿ ಮಾಡಬೇಕು ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದರು. ಎಲ್ಲ ಕೆಲಸವನ್ನು ಬದಿಗಿರಿಸಿ ಶ್ರಮದಾನದಲ್ಲಿ ಪಾಲ್ಗೊಂಡ ವಾರ್ಡಿನ ಯುವಕರಿಗೆ ಅಭಿನಂದನೆಗಳು ಮುಂದೆಯೂ ವಾರ್ಡಿನ ಇತರ ಕಡೆಗಳಲ್ಲಿಯೂ ಇದೇ ರೀತಿ ಜನರ ಸಹಕಾರದಲ್ಲಿ ಸ್ವಚ್ಚತಾ ಕಾರ್ಯ ಆಯೋಜನೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸುಮಾರು 25ಕ್ಕಿಂತಲೂ ಅಧಿಕ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು. ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಸ್ನೇಕ್ ಅಶೋಕ್ ಅವರು ತಂಪು ಪಾನೀಯದ ವ್ಯವಸ್ಥೆ ಮಾಡಿದರು.

error: Content is protected !!