ಒಡಿಶಾ, ಭೀಕರ ರೈಲು ಅಪಘಾತ : 233 ಮಂದಿ ಸಾವು: 900ಕ್ಕೂ ಅಧಿಕ ಮಂದಿ ಗಾಯ:ಹಲವರ ಸ್ಥಿತಿ ಚಿಂತಾಜನಕ..!

 

 

 

ಭುವನೇಶ್ವರ: ಒಡಿಶಾದ  ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು, 900 ಮಂದಿ ಗಾಯಗೊಂಡಿದ್ದಾರೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಶನಿವಾರ ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಲವಾರು ಬೋಗಿಗಳು ಹಳಿತಪ್ಪಿದ್ದವು.ರೈಲ್ವೇ ವಕ್ತಾರ ಅಮಿತಾಭ್ ಶರ್ಮಾ ಅವರ ಪ್ರಕಾರ, ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.” ಸಂಜೆ 7 ಗಂಟೆ ಸುಮಾರಿಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನ 10-12 ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿದ್ದವು. ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆ ರೈಲಿನ 3-4 ಕೋಚ್‌ಗಳು ಕೂಡಾ ಹಳಿತಪ್ಪಿದವು” ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಇನ್ನು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅಧಿಕಾರಿಗಳ ಪ್ರಕಾರ 3 ಎನ್​ಡಿಆರ್​ಎಫ್​, 4 ಒಡಿಆರ್​ಎಎಫ್ ಮತ್ತು 22 ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಕ್ರವಾರ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ನಿಯಂತ್ರಣ ಕೊಠಡಿ ಹಾಗೂ ಎಸ್​ಆರ್​ಸಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು.
ಎಲ್ಲಾ ಗಾಯಗೊಂಡ ಸಂತ್ರಸ್ತರಿಗೆ ಬಿಎಸ್‌ಕೆವೈ ಸೌಲಭ್ಯದ ಆಸ್ಪತ್ರೆಗಳು ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ಸಿಎಂ ಆದೇಶಿಸಿದರು. ಚಿಕಿತ್ಸಾ ವೆಚ್ಚವನ್ನು ರಾಜ್ಯವು ಭರಿಸಲಿದೆ ಎಂದು ಅವರು ಹೇಳಿದರು. ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಬಾಲಸೋರ್, ಭದ್ರಕ್, ಜಾಜ್‌ಪುರ್ ಮತ್ತು ಕೆಂದುಜಾರ್‌ನ ಜಿಲ್ಲಾ ಆಡಳಿತದ ಕಲೆಕ್ಟರ್‌ಗಳು, ಎಸ್‌ಪಿ ಮತ್ತು ಅಧಿಕಾರಿಗಳನ್ನು ಸಹಾಯ ಕೇಳಲಾಗಿದೆ. ಭುವನೇಶ್ವರದ ಎಸ್‌ಆರ್‌ಸಿಯ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ರೈಲ್ವೆ ಸಚಿವ ಅಶ್ಬಿನಿ ವೈಷ್ಣವ್​ ಸ್ಥಳದಲ್ಲಿ ಬಿಡಾರ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರೆ, ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದೆ.
ಪ್ರಧಾನಿ ಮೋದಿ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಧಾನಿ ಧನ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ನಡುವೆ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ. ಭುವನೇಶ್ವರದ ಎಸ್‌ಆರ್‌ಸಿಯ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾ ರಾಜ್ಯದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ, ಡೆವಲಪ್‌ಮೆಂಟ್ ಕಮಿಷನರ್-ಕಮ್-ಎಸಿಎಸ್-ಅನು ಗಾರ್ಗ್, ಐ & ಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಸಿಂಗ್, ಎಂಡಿ, ಒಎಸ್‌ಡಿಎಂಎ ಜ್ಞಾನ್ ದಾಸ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಲು ಎಸ್‌ಆರ್‌ಸಿಯ ನಿಯಂತ್ರಣ ಕೊಠಡಿಯಲ್ಲಿದ್ದಾರೆ.

error: Content is protected !!