ಚಾರ್ಮಾಡಿ ಅರಣ್ಯದಲ್ಲಿ ಬೆಂಗಳೂರಿನ ಟೆಕ್ಕಿ ನಾಪತ್ತೆ:ಮಧ್ಯರಾತ್ರಿ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ಕರೆತಂದ ಸ್ಥಳೀಯರು:

 

 

ಬೆಳ್ತಂಗಡಿ  : ಚಾರ್ಮಾಡಿ ಅರಣ್ಯಪ್ರದೇಶಕ್ಕೆ ಚಾರಣಕ್ಕೆ ಎಂದು ಬಂದು ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಟೆಕ್ಕಿಯನ್ನು ಸ್ಥಳೀಯರ ತಂಡವೊಂದು ಅಹೋರಾತ್ರಿ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರದ ನಾಗಪುರ ಮೂಲದ ಬೆಂಗಳೂರಿನಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಎಂಬವರು‌ ಚಿಕ್ಕಮಗಳೂರಿನ ಮೂಡಿಗೆರೆಯ ರಾಣಿಝರಿ ಫಾಲ್ಸ್​​ನಿಂದ ಬಂಡಾಜೆ ಎರ್ಮಾಯಿ ಫಾಲ್ಸ್ ಅರಣ್ಯದ ಕಡೆಗೆ ಚಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ, ರಾತ್ರಿಯಾಗುತ್ತಿದ್ದಂತೆ ದಾರಿ ಕಾಣದೇ ಅರಣ್ಯದಲ್ಲಿಯೇ ಉಳಿದು ಬಿಟ್ಟಿದ್ದಾರೆ.ಈ ವೇಳೆ ಕಂಗಾಲಾದ ಅವರು ಬೆಂಗಳೂರಿನ ಸಹೋದ್ಯೋಗಿಗಳಿಗೆ ತಾನಿರುವ ಲೊಕೇಶನ್ ಕಳಿಸಿದ್ದರು. ತಕ್ಷಣ ಗೆಳೆಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಆತ ಕಾಡಿನಲ್ಲಿಯೇ ಕಾಣೆಯಾಗಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದು ಚಾರ್ಮಾಡಿಯ ಹೊಟೇಲ್ ಹನೀಫ್ ಅವರಿಗೆ ತಿಳಿದು ಚಾರ್ಮಾಡಿಯ ಗ್ರೂಪಿಗೆ ಹಾಕಿದ್ದರು.

ಬಳಿಕ ಸಿನಾನ್ ಚಾರ್ಮಾಡಿ ಎಂಬವರು ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಸ್ಥಳೀಯರಾದ ಮುಬರ್, ಕಾಜೂರು ಎರ್ಮಾಲ್‌ನ ಅಶ್ರಫ್, ಕಾಜೂರಿನ ಶಂಸು, ನಾಸೀರ್, ಸುಧೀರ್ ವಳಂಬ್ರ, ಜನಾರ್ದನ, ಪೊಲೀಸ್ ಇಲಾಖೆಯ ಶಶಿಧರ್, ಆಸಿಫ್ ಸೋಮಂತಡ್ಕ, ಜೀವರಕ್ಷಕ ಆಂಬ್ಯುಲೆನ್ಸ್ ಚಾಲಕ ಜಲೀಲ್  ಇವರುಗಳ ತಂಡ ಹುಡುಕಾಟ ನಡೆಸಿದೆ.ಎರಡು ತಂಡಗಳಾಗಿ ಪತ್ತೆ ಕಾರ್ಯಾಚರಣೆ ನಡೆಸಲು ಸಂಜೆ 5 ಗಂಟೆಗೆ ಹೊರಡಲಾಗಿತ್ತು. ರಾತ್ರಿ 12 ಗಂಟೆಗೆ ದಟ್ಟ ಅರಣ್ಯದಲ್ಲಿ ಟೆಕ್ಕಿಯನ್ನು ಪತ್ತೆ ಹಚ್ಚಲಾಗಿದೆ. ತಂಡ ಅಲ್ಲಿ ತಲುಪುವಷ್ಟರಲ್ಲಿ ಟೆಕ್ಕಿ ಹಸಿವು, ಮತ್ತು ಭಯದಿಂದ ತತ್ತರಿಸಿ ತೀವ್ರ ಬಸವಳಿದು ಹೋಗಿದ್ದರು. ಅವರಿಗೆ ಬಿಸ್ಕೆಟ್ ಹಾಗೂ ತಂಪು ಪಾನೀಯ ಕುಡಿಸಿ ಸ್ವಲ್ಪ ಸುಧಾರಿಸಿಕೊಂಡು ಅಲ್ಲಿಂದ ಆತನನ್ನು ಹೊತ್ತುಕೊಂಡು ಬೆಳ್ಳಂಬೆಳಗ್ಗೆ 4.30ರ ವೇಳೆಗೆ ಕಾಜೂರಿಗೆ ಕರೆತರಲಾಗಿದೆ. ಈ ನಡುವೆ ತಂಡಕ್ಕೆ ನೆಟ್​​​ವರ್ಕ್​ ಕೈಕೊಟ್ಟದ್ದಲ್ಲದೇ, ಕಾಡಾನೆ ಎದುರಾದ ಪ್ರಸಂಗವೂ ನಡೆದಿದೆ. ಒಟ್ಟಿನಲ್ಲಿ ತಂಡವು ಸುರಕ್ಷಿತವಾಗಿ ಟೆಕ್ಕಿಯನ್ನು ಅರಣ್ಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

error: Content is protected !!