ಸಿದ್ಧರಾಮಯ್ಯರಿಂದ ಹಿಂದೂ ಕಾರ್ಯಕರ್ತರ ಹತ್ಯೆ,ಶಾಸಕ ಹರೀಶ್ ಪೂಂಜ ಹೇಳಿಕೆ ಖಂಡನೀಯ: ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ವಿಫಲ: ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ:

 

 

 

ಬೆಳ್ತಂಗಡಿ : ಕರ್ನಾಟಕದ ಮುಖ್ಯಮಂತ್ರಿಯಾಗಿ 2ನೇ ಬಾರಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ರವರಿಗೆ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಬೆಳ್ತಂಗಡಿಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು. ಅವರು ಮೇ 25 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೇಸ್ ಪಕ್ಷ ನೀಡಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಈಗಾಗಲೇ ಮುಖ್ಯ ಮಂತ್ರಿಗಳು ಆದೇಶ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.

ಶಾಸಕ ಹರೀಶ್ ಪೂಂಜ ಹೇಳಿಕೆ ಖಂಡನೀಯ:

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು 24 ಜನ ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎನ್ನುವಂತಹ ಮಾತನ್ನು ಸಾರ್ವಜನಿಕವಾಗಿ ಹೇಳಿದ್ದು ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ.

ಈ ಬಗ್ಗೆ ನಮ್ಮ ಕಾರ್ಯಕರ್ತರು ಪೋಲೀಸರಿಗೆ ದೂರು ನೀಡಿದ್ದು, ಶಾಸಕ ಹರೀಶ್ ಪೂಂಜಾ ಮತ್ತು ಬಿ.ಜೆ.ಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ದ ಬೆಳ್ತಂಗಡಿ ಠಾಣಾದಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಬಿ.ರಿಪೋರ್ಟ್ ಹಾಕುವಂತೆ ಒತ್ತಡ:

ಕಳೆದ ವಿಧಾನಸಬಾ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಹರೀಶ್ ಪೂಂಜಾ ರವರು ಮತದಾರರಿಗೆ ಹಣ, ಹೆಂಡ ಹಂಚಿ ವಿಜೇತರಾಗಿದ್ದು ಚುನಾವಣಾಧಿಕಾರಿಗಳು, ಕೆಲ ಕಂದಾಯ ಅಧಿಕಾರಿಗಳು ಮತ್ತು ಮುಖ್ಯವಾಗಿ ಪೊಲೀಸ್ ಇಲಾಖಾಧಿಕಾರಿಗಳು ಹರೀಶ್ ಪೂಂಜಾ ರವರ ಜೊತೆ ಶಾಮಿಲಾಗಿ ಈ ಅಕ್ರಮವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಬೆಳ್ತಂಗಡಿಯ ಕೆಲ್ಲಗುತ್ತುವಿನಲ್ಲಿ ಹಣ ಹಂಚುವಾಗ ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದು ನಂತರ ನಾನು ಅಲ್ಲಿಗೆ ತೆರಳಿದ ನಂತರ ನಮ್ಮ ಒತ್ತಾಯಕ್ಕೆ ಮಣಿದು ತಪಾಸಣೆ ನಡೆಸಿ 61,500/- ನ್ನು ಜಪ್ತಿ ಮಾಡಿರುತ್ತಾರೆ. ಆ ಬಗ್ಗೆ ಅವರ ವಿರುದ್ದ ಎಫ್.ಐಅರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ‘ಬಿ’ ರಿಪೋರ್ಟ್ ಹಾಕಲು ಶಾಸಕ ಹರೀಶ್ ಪೂಂಜಾ ಒತ್ತಡ ಹೇರುತ್ತಿದ್ದು ಅಂತಹ ದುಸ್ಸಾಹಸಕ್ಕೆ ಪೋಲೀಸರು ಕೈ ಹಾಕಬಾರದು  ಎಂದು  ಎಚ್ಚರಿಕೆ ನೀಡಿದರು.

 

ಬಿಜೆಪಿಗರಿಂದ ಮೃಗೀಯ ವರ್ತನೆ:

ಚುನಾವಣೆ ಕಳೆದ ಬಳಿಕ ಬಿ.ಜೆ.ಪಿ.ಯವರು ವಿಜಯೋತ್ಸವ ನಡೆಸುವ ಸಂದರ್ಭದಲ್ಲಿ ತಾಲೂಕಿನ ಹಲವಾರು ಕಡೆ ನಮ್ಮ ಪಕ್ಷದ ಕಾರ್ಯಕರ್ತರ ಮನೆಯ ಅಂಗಳಕ್ಕೆ ಮತ್ತು ದನದ ಹಟ್ಟಿಯೊಳಗೆ ಪಟಾಕಿ ಸಿಡಿಸಿದ್ದು ಅಂತಹ ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಬಿ.ಜೆ.ಪಿಯವರ ದಬ್ಬಾಳಿಕೆಯನ್ನು ಸಮರ್ಥವಾಗಿ ಎದುರಿಸಿದ್ದು ಎಲ್ಲಾ ಕಡೆ ತಪ್ಪಿತಸ್ಥರ ವಿರುದ್ದ ಎಫ್ಐಆರ್ ಆಗಿದೆ. ವಿಜಯೋತ್ಸವ ಎರಡು ಪಾರ್ಟಿಯವರು ಆಚರಿಸಿದ್ದೇವೆ. ಪ್ರಥಮವಾಗಿ ಆಚರಿಸಿದ್ದ ಬಿ.ಜೆ.ಪಿಯವರು ನಮ್ಮ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಮನೆಯ ಅಂಗಳಕ್ಕೆ ಹೋಗಿ ಸುಡುಮದ್ದು( ಕದೋನಿ, ಗರ್ನಲ್) ಸಿಡಿಸಿದ್ದಾರೆ ಮತ್ತು ಹೆಂಗಸರನ್ನು ಮಕ್ಕಳನ್ನು ಹೀನಾಯಾವಾಗಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಕಂಠ ಪೂರ್ತಿ ಕುಡಿದು ಕೆಲವರಿಗೆ ಹೊಡೆದಿದ್ದಾರೆ. ರಾಕ್ಷಸರಂತೆ, ಮೃಗಗಳಂತೆ ವರ್ತಿಸಿದ್ದಾರೆ.ಎಂದು ಆರೋಪಿಸಿದ ಅವರು ನಮ್ಮ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಕೂಡ ವಿಜಯೋತ್ಸವನ್ನು ಆಚರಿಸಿದ್ದಾರೆ. ನಮ್ಮ ಕಾರ್ಯಕರ್ತರು ಎಲ್ಲಿಯೂ ಕೂಡ ರಾಕ್ಷಸ ಮನೋಭಾವನೆಯಿಂದ ವರ್ತಿಸಿಲ್ಲ. ಬಿ.ಜೆಪಿಯವರ ಅಂಗಳದಲ್ಲಿ ಸುಡುಮದ್ದು ಸಿಡಿಸಿಲ್ಲ. ಮೃಗೀಯ ಭಾವನೆಯಿಂದ ವರ್ತಿಸಿಲ್ಲ. ಮನುಷ್ಯತ್ವದಿಂದ ವರ್ತಿಸಿದ್ದಾರೆ.

ವಿನಾ ಕಾರಣ ಅಂಬುಲೆನ್ಸ್ ಓಡಾಟ:

ನಮ್ಮ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸುವ ಮೆರವಣಿಗೆ ಸಂದರ್ಭ ಹರೀಶ್ ಪೂಂಜಾ ಬೆಂಬಲಿಗರ ಅಂಬುಲೆನ್ಸ್ ವಿನಾಕಾರಣ ಅತ್ತಿಂದಿತ್ತ ಓಡಾಡಿದ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೆವು. ಆದರೆ ಅದನ್ನು ಮುಚ್ಚಿ ಹಾಕುವ ಕೆಲಸವನ್ನು ಪೋಲಿಸರು ಮಾಡಿದ್ದಾರೆ. ಬೆಳ್ತಂಗಡಿ ಪೋಲೀಸ್ ನಿರೀಕ್ಷಕರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ “ಖುಷಿ ಅಂಬುಲೆನ್ಸ್ ಎ 17ರಂದು 12.30 ಗಂಟೆಗೆ ಗುರುವಾಯನಕೆರೆಯ ಅಭಯ ಆಸ್ಪತ್ರೆಯಿಂದ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರಾದ ಡಾ|| ಪ್ರಿಯಾಂಕ ಎಂಬವರನ್ನು ಕರೆದುಕೊಂಡು ಉಜಿರೆಗೆ ಬಿಟ್ಟು ನಂತರ ಉಜಿರೆಯಿಂದ ವಾಪಾಸು ಕರೆದುಕೊಂಡು ಸುಮಾರು 1.30 ಗಂಟೆಗೆ ಅಭಯಾ ಆಸ್ಪತ್ರೆಗೆ ಕರೆದುಕೊಂಡು ಬಳಿಕ ಅದೇ ಅಂಬುಲೆನ್ಸ್ ನಲ್ಲಿ ಸುಮಾರು 2.30 ಗಂಟೆಗೆ ವಾಪಾಸು ಬಿಟ್ಟಿರುವ ಬಗ್ಗೆ ತಿಳಿಸಿದ್ದಾರೆ ಇದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳವುದಕ್ಕಾಗಿ ಪೋಲೀಸ್ ಅಧಿಕಾರಿಗಳು ಬಿ.ಜೆ.ಪಿ ಅಭ್ಯರ್ಥಿ ಹರೀಶ್ ಪೂಂಜಾರ ಜೊತೆಗೂಡಿ ಮಾಡಿದಂತಹ ಕಟ್ಟು ಕಥೆಯಾಗಿದೆ.ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮನೋಹರ್ ಇಳಂತಿಲ ಉಪಸ್ಥಿತರಿದ್ದರು.

error: Content is protected !!