ಬಜರಂಗದಳವನ್ನು ಪಿಎಫ್‌ಐ ಸಂಘಟನೆಗೆ ಹೋಲಿಕೆ: ಪಂಜಾಬ್ ಕೋರ್ಟ್ ನಿಂದ ಮಲ್ಲಿಕಾರ್ಜುನ ಖರ್ಗೆಗೆ ಸಮನ್ಸ್..!

ನವದೆಹಲಿ: ಕರ್ನಾಟಕ್ಕೆ ಮುಂದಿನ ಮುಖ್ಯಮಂತ್ರಿಯನ್ನು ಘೋಷಣೆ ಮಾಡಲು ಮುಂದಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಇಂದು ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಹಿಂದೂ ಸಂಘಟನೆ ಬಜರಂಗದಳವನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಗೆ ಹೋಲಿಕೆ ಮಾಡಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಸುರಕ್ಷಾ ಪರಿಷತ್‌ನ ಸಂಸ್ಥಾಪಕ ಹಿತೇಶ್ ಭಾರದ್ವಾಜ್ ಅವರು 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯ, ಕಾಂಗ್ರೆಸ್ ಅಧ್ಯಕ್ಷರಿಗೆ ಸ್ಪಷ್ಟನೆ ನೀಡುವಂತೆ ಸಮನ್ಸ್ ನೀಡಿದೆ.

ವಿಶ್ವ ಹಿಂದೂ ಪರಿಷತ್‌ನಿಂದಲೂ ಲೀಗಲ್ ನೋಟಿಸ್: ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ 100 ಕೋಟಿ ರೂ.ಗೂ ಹೆಚ್ಚು ಪರಿಹಾರ ನೀಡುವಂತೆ ಆಗ್ರಹಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಶ್ವ ಹಿಂದೂ ಪರಿಷತ್ ಲೀಗಲ್ ನೋಟಿಸ್ ಜಾರಿ ಮಾಡಿತ್ತು. ವಿಹಿಂಪ ಚಂಡೀಗಢ ಘಟಕ ಮತ್ತು ಅದರ ಯುವ ಘಟಕ ಬಜರಂಗದಳ ಮೇ 4 ರಂದೇ ಈ ನೋಟಿಸ್ ನೀಡಿದೆ. ಅಲ್ಲದೇ, 14 ದಿನಗಳಲ್ಲಿ ಪರಿಹಾರವನ್ನು ನೀಡಬೇಕು ಎಂದೂ ಅದರಲ್ಲಿ ಒತ್ತಾಯಿಸಿತ್ತು. ಈವರೆಗೆ ಕಾಂಗ್ರೆಸ್ ಉತ್ತರಿಸಿಲ್ಲ.

ಕಾಂಗ್ರೆಸ್ ಗೆ ವಿಹೆಚ್‌ಪಿ ಸವಾಲ್..!
ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳ ಜೊತೆಗೆ, ಪ್ರಮುಖವಾಗಿ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂತಹ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಜಾತಿ ಮತ್ತು ಧರ್ಮ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಬದ್ಧ ಎಂದಿದೆ. ಅಲ್ಲದೇ. ಒಂದು ಹೆಜ್ಜೆ ಮುಂದೆ ಹೋಗಿ ಸಮಾಜದ ಶಾಂತಿಯನ್ನು ಕದಡುವ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಭರವಸೆ ನೀಡಿದೆ.ಕಾಂಗ್ರೆಸ್‌ಗೆ ಸವಾಲು: ಪ್ರಣಾಳಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಹವರ್ತಿ ಸಂಸ್ಥೆಯಾದ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಿದ್ದೀರಿ. ಅಲ್ಲದೇ, ಪ್ರಮುಖವಾಗಿ ಸಂಘಟನೆಯನ್ನು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐಗೆ ಸಮಾನವಾಗಿ ಹೋಲಿಸಿದ್ದೀರಿ. ಪಿಎಫ್‌ಐನಂತೆ ಬಜರಂಗದಳ ಯಾವ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕಾಂಗ್ರೆಸ್‌ಗೆ ಸವಾಲು ಹಾಕಿದೆ.

error: Content is protected !!