ಬೆಂಗಳೂರು: ಬೆಳ್ತಂಗಡಿಯ ವಿನು ಬಳೆಂಜ ನಿರ್ದೆಶನದ ‘ಬೇರ’ ಚಲನಚಿತ್ರದ ಟೀಸರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಅಚ್ಚುಮೆಚ್ಚಿನ ನಟ ಎಂದು ಕರೆಯಿಸಿಕೊಂಡಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಇದೀಗ ಕಿರುತೆರೆ ನಿರ್ದೇಶಕ ವಿನು ಬಳಂಜ ನಿರ್ದೇಶನದ ಮೊದಲ ಚಿತ್ರ ‘ಬೇರ’ಗೆ ಸಾಥ್ ನೀಡಿದ್ದಾರೆ. ವಿಭಿನ್ನ ಕಥೆ ಆಧರಿಸಿರೋ ‘ಬೇರ’ ಚಿತ್ರದ ಟೀಸರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಬಳಿಕ ಮಾತನಾಡಿದ ನಿರ್ದೇಶಕ ವಿನು ಬಳಂಜ, ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಬಳಿಕ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ ‘ಬೇರ’ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ ಎಂದು ತಿಳಿಸಿದರು.ಮುಂದುವರೆದು ಹೇಳಿದ ಅವರು, ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ‘ಯಾವ ತಾಯಿ ಮಕ್ಕಳೂ ಇನ್ನೊಬ್ಬರಿಂದಾಗಿ ಸಾಯಬಾರದು ‘ ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ ಎಂದು ನುಡಿದರು.
ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದು ಚಿತ್ರದಲ್ಲಿ ನಟಿಸಿರುವ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು ಹೇಳಿದರು. ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ ‘ಬೇರ’ ಚಿತ್ರದ ಕುರಿತು ಮಾತನಾಡಿದರು.ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ‘ಬೇರ’ ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ನಿರ್ಮಾಪಕ ದಿವಾಕರ ದಾಸ ಜನತೆಯಲ್ಲಿ ಕೇಳಿಕೊಂಡರು. ಸದ್ಯ ಟೀಸರ್ ನಿಂದ ಗಮನ ಸೆಳೆಯುತ್ತಿರೋ ಬೇರ ಚಿತ್ರ ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಕನ್ನಡದಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹೀಗಿರುವಾಗ ಬೇರ ಚಿತ್ರ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಶಿವ ರಾಜ್ಕುಮಾರ್ ಅವರ ಬೆಂಬಲ ಕೂಡ ಈ ಸಿನಿಮಾಗೆ ಸಿಕ್ಕಿದೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.