ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಜಿಲ್ಲೆಯ ಬಿಜೆಪಿಗರು ಸಿಡಿ ವಿಚಾರಕ್ಕೆ ಕೋರ್ಟಿಗೆ ಮೊರೆ ಹೋಗಿದ್ದಾರೆ : ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗಂಭೀರ ಆರೋಪ:

 

 

 

 

 

ಬೆಳ್ತಂಗಡಿ: ‌ ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿ ಬರಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಚಾರ ತಿಳಿದು ಬಂತು ಇಂತಹ ಪರಿಸ್ಥಿತಿ ಬಂದಿರುವುದೇಕೆ? ಬಿಜೆಪಿಯ ಇತಿಹಾಸ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ. ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದು ಕೇಳಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು ಇಂದು ಕೋರ್ಟ್ ಮೊರೆ ಹೋಗಿದ್ದಾರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು.ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಎ 22ರಂದು ಉಜಿರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

 

 

ಇಂದು ಪವಿತ್ರ ರಂಜಾನ್ ಹಬ್ಬ. ಧರ್ಮ ಯಾವುದಾದರೂ ತತ್ವವೊಂದೇ , ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಇದರಲ್ಲಿ ನಂಬಿಕೆ ಇಟ್ಟುಕೊಂಡು ನಾವು ಬದುಕುತ್ತಿದ್ದೇವೆ. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ನಮ್ಮ ತಂದೆ ತಾಯಂದಿರ ಕೃಪೆ, ಆಶೀರ್ವಾದದಿಂದ ನಾವು ಬೇಳೆದಿದ್ದೇವೆ. ಆಮೂಲಕ ಜಾತಿ ಹಾಗೂ ಧರ್ಮದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಏನೇ ಆದರೂ ನಾವು ಮನುಷ್ಯರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ಎಲ್ಲರಿಗೂ ತಮ್ಮ ಧರ್ಮ ಆಚರಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಧರ್ಮಪೀಠಗಳು ಮಾನವೀಯತೆ ಮೆರೆದಿವೆ. ನನಗೆ ಮಂಜುನಾಥನ ಬಗ್ಗೆ ವಿಶೇಷ ಆಸಕ್ತಿ ಹಾಗೂ ಭಕ್ತಿ.

 

 

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರಿಗೆ ಯಶಸ್ಸು ಸಿಗಲಿ ಎಂದು ಧರ್ಮಸ್ಥಳದ ಮಂಜುನಾಥ ಹಾಗೂ ಜನಾರ್ಧನ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರವನ್ನು ಮಾಜಿ ಶಾಸಕ ವಸಂತ ಬಂಗೇರಾ ಅವರು ಹಲವು ಬಾರಿ ಸ್ಪರ್ಧಿಸಿ ಸೋತು, ಗೆದ್ದು, ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪಕ್ಷ ಇಷ್ಟು ಗಟ್ಟಿಯಾಗಿ ನಿಲ್ಲಲು ಅವರು ಹೊಸಬರಿಗೆ ಅವಕಾಶ ನೀಡಲು ದಾರಿ ಮಾಡಿಕೊಟ್ಟಿದ್ದಾರೆ.
ಮೋದಿ ಅವರು ಕಳೆದ ಚುನಾವಣೆಯಲ್ಲಿ ನೀವು ಮತಹಾಕುವಾಗ ನಿಮ್ಮ ಮನೆ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಿ ಮತ ಹಾಕಿ ಎಂದು ಹೇಳಿದ್ದರು. ಈಗ ನಾವು ಏನು ಹೇಳಬೇಕು? ನಾನು ನಮ್ಮ ನಾಯಕರುಗಳಿಗೆ ಒಂದು ಸಲಹೆ ನೀಡುತ್ತೇನೆ. ನೀವು ಪ್ರತಿ ಬೂತ್ ಮುಂದೆ ಸಿಲಿಂಡರ್ ಇಟ್ಟು ಅದಕ್ಕೆ ಒಂದು ಹೂವಿನ ಹಾರ ಹಾಕಬೇಕು. ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಬೆಲೆಗಳು ಗಗನಕ್ಕೇರಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಸಹಾಯ ಮಾಡಲು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿವೆ.

 

 

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಎಲ್ಲಾ ಘೋಷಣೆಗಳ ಗ್ಯಾರಂಟಿ ಕಾರ್ಡ್ ಗಳನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಿ. ಮೇ 13ರಂದು ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ನಾಯಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಕೆಲವರು ಲಂಚಕ್ಕೆ ಅಧಿಕಾರ ಕಳೆದುಕೊಂಡರೆ, ಮತ್ತೆ ಕೆಲವರು ಮಂಚಕ್ಕೆ ರಾಜೀನಾಮೆ ಕೊಟ್ಟರು. ಶಿವಮೊಗ್ಗದಲ್ಲಿ ದ್ವೇಷ ರಾಜಕೀಯವನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರೇ ಟೀಕಿಸಿದ್ದರು.
ಇನ್ನು ಬಿಜೆಪಿಯವರು ರಾಜ್ಯದ ನಂದಿನಿ ಹಾಲನ್ನು ಬಿಟ್ಟು ಗುಜರಾತಿನ ಹಾಲು ಖರೀದಿ ಮಾಡಿ ಎಂದು ಹೇಳುತ್ತಿದ್ದಾರೆ. ನಮ್ಮ ರೈತರು ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಂದಿನಿ ಮೇಲೆ ಅಮೂಲ್ ಹೇರಿಕೆ ಮಾಡಲಾಗುತ್ತಿದೆ. ನಮ್ಮ ಹಾಲು ಉತ್ಪಾದಕರನ್ನು ಬೊಮ್ಮಾಯಿ ಅವರಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತ್ತು. ಆಕ್ಸಿಜನ್ ಇಲ್ಲದೆ ಅನೇಕರು ಸತ್ತರು. ಸತ್ತವರಿಗೆ ಸರ್ಕಾರ ಪರಿಹಾರ ನೀಡಲಿಲ್ಲ. ನಷ್ಟ ಅನಭವಿಸಿದ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ನೀಡಲಿಲ್ಲ. ಜನರಿಗೆ ಸಹಾಯ ಮಾಡದ ಸರ್ಕಾರ ಯಾಕೆ ಬೇಕು?‌ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ,ಎಐಸಿಸಿ ಪ್ರಧಾನ ಕಾರ್ಯರ್ಶಿ ರೋಜಿ ಜಾನ್, ವಿ.ಪ. ಸ ಹರೀಶ್ ಕುಮಾರ್,ಮಂಜುನಾಥ್ ಭಂಡಾರಿ, ಮೂಡಬಿದ್ರೆ , ಪುತ್ತೂರು ಅಭ್ಯರ್ಥಿಗಳಾದ ಮಿಥುನ್ ರೈ, ಅಶೋಕ್ ರೈ, ಶಾಲೇಟ್ ಪಿಂಟೋ, ಕೃಪಾ ಆಳ್ವ, ಶಾಹಿದ್ ತೆಕ್ಕಿಲ್ , ಮಮತಾ ಗಟ್ಟಿ, ವಂದನಾ ಭಂಡಾರಿ, ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷರುಗಳಾದ ರಂಜನ್ .ಜಿ.ಗೌಡ, ಶೈಲೇಶ್ ಕುರ್ತೋಡಿ, ಸೇರಿದಂತೆ ಕಾಂಗ್ರೆಸ್ಸಿನ ಮುಖಂಡರುಗಳು ಉಪಸ್ಥಿತರಿದ್ದರು. ರಕ್ಷಿತ್ ಶಿವರಾಂ ಸ್ವಾಗತಿಸಿ, ಶೈಲೇಶ್ ಕುಮಾರ್ ಕುರ್ತೋಡಿ ಧನ್ಯವಾದವಿತ್ತರು, ಕೇಶವ ಪಿ. ಬೆಳಾಲ್ ಕಾರ್ಯಕ್ರಮ ನಿರೂಪಿಸಿದರು. ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು  ಪಕ್ಷದ ಶಾಲು, ಧ್ವಜ ನೀಡಿ ಸ್ವಾಗತಿಸಲಾಯಿತು.  ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!