
ಬೆಳ್ತಂಗಡಿ: ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಬೇಲಿ ಹಾನಿಗೊಳಿಸಿದಲ್ಲದೆ, ಆಕ್ಷೇಪಿಸಿದ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿ ಖಾಸಗಿ ಅಂಗ ಪ್ರದರ್ಶಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಹೊಸಂಗಡಿ ಗ್ರಾಮದ ಪಡ್ಯಾಡಿ ನಿವಾಸಿ ಹನೀಫ್ ಬಂಧಿತ ಆರೋಪಿ. ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸೆ. 7ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ದಲಿತ ಕುಟುಂಬವೊಂದು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ವಾಸವಿದ್ದು, ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಜಾಗವನ್ನು ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯಿಂದ ರಕ್ಷಿಸಿಕೊಂಡಿತ್ತು. ಈ ಜಾಗಕ್ಕೆ ಹನೀಫ್ ಅಕ್ರಮವಾಗಿ ಪ್ರವೇಶಿಸಿ, ಜಾತಿನಿಂದನೆ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿ, ಬೇಲಿಯನ್ನು ಕಿತ್ತೆಸೆದು ಹಾನಿಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಕ್ರಮ ಪ್ರವೇಶ ಹಾಗೂ ಬೇಲಿ ಹಾನಿಯನ್ನು ಪ್ರಶ್ನಿಸಿದ್ದು, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಹನೀಫ್ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಜಾಗವನ್ನು ತೊರೆಯದಿದ್ದರೆ ಮಾನಭಂಗ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಮಹಿಳೆಯರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ಭಯಭೀತರಾದ ಕುಟುಂಬಸ್ಥರು ಸ್ಥಳೀಯ ದಲಿತ ಮುಖಂಡರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ, ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಸಲ್ಲಿಸಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಹಾಗೂ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.