
ಬೆಳ್ತಂಗಡಿ: ಎಂಡೋಸಲ್ಫಾನ್ ಪೀಡಿತ ಮಕ್ಕಳಿಗಾಗಿ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಾನಿಧ್ಯ’ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರದ ಸಹಯೋಗದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ‘ಸಾನಿಧ್ಯ ರೋಟರಿ ಸಭಾಭವನ’ ಸೆ.19ರಂದು ಮಧ್ಯಾಹ್ನ 2.30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ. ತಿಳಿಸಿದ್ದಾರೆ.
ಸೆ.15ರಂದು ಉಜಿರೆಯ ಸಾನಿಧ್ಯ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು.
ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯು.ಟಿ. ಖಾದರ್ ಫರೀದ್ ಸಭಾಭವನವನ್ನು ಉದ್ಘಾಟಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಂಗಳೂರಿನ ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನವಿಯ ಮೇರೆಗೆ 2018ರಲ್ಲಿ ಉಜಿರೆಯಲ್ಲಿ ‘ಸಾನಿಧ್ಯ’ ಕೌಶಲ್ಯ ತರಬೇತಿ ಕೇಂದ್ರವನ್ನು ಆರಂಭಿಸಿತ್ತು. ಪ್ರಸ್ತುತ ಇಲ್ಲಿ 40 ವಿಶೇಷ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಎಂಡೋಸಲ್ಫಾನ್ ಪೀಡಿತ ಮಕ್ಕಳಲ್ಲಿ ಕಂಡುಬರುವ ಬುದ್ಧಿಮಾಂದ್ಯತೆ, ಮೆದುಳಿನ ಪಾರ್ಶ್ವವಾಯು, ಬಹುವಿಧ ನ್ಯೂನ್ಯತೆ, ಆಟಿಸಂ ಹಾಗೂ ನಿರ್ದಿಷ್ಟ ಕಲಿಕೆಯ ಸಮಸ್ಯೆಗಳಿಗೆ ಅನುಗುಣವಾಗಿ ವಿವಿಧ ಥೆರಪಿ ಮತ್ತು ಕೌಶಲ್ಯ ತರಬೇತಿಗಳನ್ನು ನಿರಂತರವಾಗಿ ನೀಡಲಾಗುತ್ತಿದೆ.
ಮಕ್ಕಳಿಗೆ ಊಟ, ಯೋಗ, ಥೆರಪಿ ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸಲು ಸೂಕ್ತವಾದ ಸಭಾಭವನದ ಅಗತ್ಯವನ್ನು ಮನಗಂಡು ಬೆಳ್ತಂಗಡಿ ರೋಟರಿ ಕ್ಲಬ್ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬೆಂಗಳೂರಿನ ಇಂದಿರಾನಗರ ರೋಟರಿ ಕ್ಲಬ್ ಪ್ರಾಯೋಜಿತ ‘ಸ್ವರಸ್ವತಿ’ ಸಂಸ್ಥೆ ಹಾಗೂ ಬೆಳ್ತಂಗಡಿ ರೋಟರಿಯ ವತಿಯಿಂದ ರೂ.7 ಲಕ್ಷ ದೇಣಿಗೆಯ ಚೆಕ್ ಅನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು ಎಂದು ಶ್ರೀಧರ ಕೆ.ವಿ. ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ 3181ರ ಸಹಾಯಕ ರಾಜ್ಯಪಾಲ ರೊ. ಡಾ. ಶಶಿಧರ್ ಡೊಂಗ್ರೆ, ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಅಧ್ಯಕ್ಷ ಗೋಪಿನಾಥ್ ಎನ್., ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ, ದಕ್ಷಿಣ ಕನ್ನಡ ಜಿಲ್ಲಾ ಎಂಡೋಸಲ್ಫಾನ್ ನೋಡೆಲ್ ಅಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್, ರೋಟರಿ ಜಿಲ್ಲೆ 3192ರ ಲೆಫ್ಟಿನೆಂಟ್ ಗವರ್ನರ್ ರೊ. ಜಗದೀಶ್ ಮುಗುಳಿ, ರೋಟರಿ ಜಿಲ್ಲಾ ಕಾರ್ಯದರ್ಶಿ ರೊ. ಸುಪ್ರಿಯಾ ಕಂದಾರಿ, ರೋಟರಿ ಕ್ಲಬ್ ಇಂದಿರಾನಗರದ ನಿಯೋಜಿತ ಅಧ್ಯಕ್ಷ ರೊ. ನರಸಿಂಹನ್ ಕಣ್ಣನ್, ರೋಟರಿ ಬೆಂಗಳೂರು ದಿಶಾದ ಸದಸ್ಯೆ ದಿವ್ಯ ರಾಘವನ್ ಹಾಗೂ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರೊ. ಶ್ರೀಧರ್ ಕೆ.ವಿ., ಕಾರ್ಯದರ್ಶಿ ರೊ. ಡಾ. ರಾಘವೇಂದ್ರ ಪಿದಮಲೆ, ‘ಸಾನಿಧ್ಯ’ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಹಾಗೂ ‘ಸಾನಿಧ್ಯ’ ಕೌಶಲ್ಯ ತರಬೇತಿ ಕೇಂದ್ರದ ಗೌರವ ಸಲಹೆಗಾರ ರೋಷನ್ ಸಿಕ್ಕೇರಾ ಉಪಸ್ಥಿತರಿರುವರು.
ರೋಟರಿ ಕ್ಲಬ್ ಕೋಶಾಧಿಕಾರಿ ಅಬೂಬಕ್ಕರ್, ಕ್ಲಬ್ ಸೇವೆ ಚೇರ್ಮನ್ ವಿದ್ಯಾ ಕುಮಾರ್ ಕಾಂಚೂಡು ಹಾಗೂ ಸಾನಿಧ್ಯ ಸಲಹಾ ಸಮಿತಿ ಸದಸ್ಯ ಪ್ರೇಮ್‌ರಾಜ್ ರೋಶನ್ ಸಿಕ್ವೇರ ಉಪಸ್ಥಿತರಿದ್ದರು.