ಸುಳ್ಯ : ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಮಾತಿಗೆ ಮಾತು ಬೆಳೆದು ತಂದೆಯೇ ಮಗನನ್ನು ಕೊಂದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ. ಏರಣಗುಡ್ಡೆ ಮಾತೃಮಜಲು ನಿವಾಸಿ ಶೀನ ಎಂಬವರ ಮಗ ಶಿವರಾಮ (35) ಮೃತ ವ್ಯಕ್ತಿ. ಶೀನ ಹಾಗೂ ಅವರ ಮಗ ಶಿವರಾಮನಿಗೆ ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿಯ ಪತ್ನಿ ಕವಿತಾ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ತನ್ನ ಗಂಡ ಶಿವರಾಮ ಕೂಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಮನೆಗೆ ಬರುವಾಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಊಟ ಮಾಡುವ ಸಮಯದಲ್ಲಿ ಪದಾರ್ಥ ಸರಿ ಇಲ್ಲ ಎಂದು ಶಿವರಾಮ ಅವರ ತಂದೆ ತಾಯಿ ಹಾಗೂ ಒಮ್ಮೊಮ್ಮೆ ತನ್ನ ಜೊತೆಯೂ ಜಗಳವಾಡುತ್ತಿದ್ದರು.ಹೀಗೆ ನಿನ್ನೆ ಮಧ್ಯರಾತ್ರಿ ಮನೆಗೆ ಬಂದವರು ಊಟ ಮಾಡುವ ಸಮಯ ಹಿಂದಿನ ದಿನ ಮಾಡಿದ ಕೋಳೆ ಪದಾರ್ಥ ಇಲ್ಲವೇ ಎಂದು ಅತ್ತೆ ತಂಗಮ್ಮ ಅವರನ್ನು ಕೇಳಿದ್ದಾರೆ. ಆಗ ಅವರು ಪದಾರ್ಥ ಮುಗಿದಿದೆ ಎಂದು ಹೇಳಿದ್ದಕ್ಕೆ, ‘ನನಗೆ ಈಗಲೇ ಕೋಳಿ ಪದಾರ್ಥ ಬೇಕು’ ಎಂದಿದ್ದಾರೆ. ಆಗ ಅತ್ತೆ, ಕೋಳಿ ತಂದು ಕೊಟ್ಟರೆ ಪದಾರ್ಥ ಮಾಡಿ ಕೊಡುವುದಾಗಿ ಹೇಳಿದ್ದಾರೆ. ಆಗ ತನ್ನ ಪತಿ ಸ್ವಲ್ಪ ದೂರ ಹೋಗಿ, ವಾಪಸ್ ಬಂದು ಮನೆಯಲ್ಲೇ ಇದ್ದ ಕೋಳಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕೋಳಿ ಓಡಿಸುತ್ತಿದ್ದ ಪತಿಯನ್ನು ಮಾವ ಶೀನ ಅವರು ಯಾಕೆ ಕೋಳಿ ಓಡಿಸುತ್ತಿದ್ದೀಯ ಎಂದು ಕೇಳಿದ್ದಾರೆ.
ಮನೆಯಲ್ಲಿ ಬೊಬ್ಬೆ ಕೇಳಿ ನೆರೆಮನೆಯ ಶಶಿಧರ ಹಾಗೂ ಜಗದೀಶ ಎಂಬವರು ಮನೆ ಹತ್ತಿರ ಬಂದಿದ್ದರು. ಕೋಳಿ ಹಿಡಿಯುತ್ತಿರುವ ವಿಷಯಕ್ಕೆ ಗಂಡ ಹಾಗೂ ಮಾವನ ಮಧ್ಯೆ ಜಗಳವಾಗಿ, ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಗಂಡನ ತಲೆಗೆ ಹೊಡೆದಿದ್ದಾರೆ. ಗಂಡ ಕುಸಿದು ಬಿದ್ದಿದ್ದು, ಶಶಿಧರ ಹಾಗೂ ಜಗದೀಶ ಅವರು ಕುಸಿದು ಬಿದ್ದಿದ್ದ ತನ್ನ ಗಂಡನನ್ನು 108 ಆಂಬ್ಯುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ಕವಿತಾ ದೂರಿನಲ್ಲಿ ವಿವರಿಸಿದ್ದಾರೆ. ತನ್ನ ಗಂಡನನ್ನು ಕೊಲೆ ಮಾಡಿರುವ ಮಾವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕವಿತಾ ಕೋರಿದ್ದಾರೆ.ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಹೊಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಶಿವರಾಮ ಅವರು ಮದುವೆಯಾಗಿ 9 ವರ್ಷ ಆಗಿದ್ದು, ಆರು ಮತ್ತು ಒಂದು ವರ್ಷದ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ, ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಶೀನನನ್ನು ಬಂಧಿಸಲಾಗಿದೆ. ಶಿವರಾಮ ಅವರ ಮೃತದೇಹವನ್ನು ಕಡಬ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.