ಹಾಸನ: ಜೈನಕಾಶಿ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಾ.23 ರಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳನ್ನು ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಮೂಲತಃ ಕಾರ್ಕಳದ ವರಂಗ ಗ್ರಾಮದವರಾದ ಇವರು 1949ರ ಮೇ 3ರಂದು ಜನಿಸಿದ್ದರು. 1970ರಲ್ಲಿ ಮಠದ ಪೀಠಾಧಿಪತಿಗಳಾಗಿ ನೇಮಕಗೊಂಡಿದ್ದರು. ಇವರ ಪೂರ್ವಾಶ್ರಮದ ಹೆಸರು ರತ್ನವರ್ಮ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದ ಅವರು, ಬಳಿಕ ಮೈಸೂರು ಯೂನಿವರ್ಸಿಟಿಯಲ್ಲಿ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಷ್ಟೇ ಅಲ್ಲದೇ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಪ್ರಾಕೃತ, ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿದ್ದರು. ಸ್ವಸ್ತಿ ಶ್ರೀ ಚಾರುಕೀರ್ತಿ ಎನ್ನುವ ಬಿರುದಾಂಕಿತ ಜೈನಭಟ್ಟಾರಕ ಶ್ರೀಗಳಿಗೆ ದೇಶಾದ್ಯಂತ ಅಪಾರ ಭಕ್ತವರ್ಗವಿದೆ. ಚಾರುಕೀರ್ತಿ ಭಟ್ಟಾರಕ ಶ್ರೀಗಳು 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕರ್ಮಯೋಗಿ ಎಂಬ ಬಿರುದೂ ನೀಡಿದ್ದರು. ಶ್ರವಣ ಬೆಳಗೊಳದಲ್ಲಿ ನಡೆದ ನಾಲ್ಕು ಮಹಾಮಸ್ತಕಾಭಿಷೇಕ ಇವರ ಸುಪರ್ದಿಯಲ್ಲಿ ನೆರವೇರಿತ್ತು ಎಂಬುವುದು ಉಲ್ಲೇಖನೀಯ. ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಗಳು ಪಾಲಿಟೆಕ್ನಿಕ್, ಇಂಜಿನಿಯರಿಂಗ್, ನರ್ಸಿಂಗ್, ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದರು. ಅಲ್ಲದೇ ನೂರಾರು ಜೈನ ದೇವಾಲಯ ಪುನರುಜ್ಜೀವನ ಗೊಳಿಸಿದ್ದಾರೆ. 12 ವರ್ಷ ವಾಹನ ಸಂಚಾರವನ್ನೇ ಮಾಡದ ಇವರು ಇದುವರೆಗೆ ಮೊಬೈಲ್ ಬಳಕೆ ಮಾಡಿಲ್ಲ ಎಂಬುವುದು ಮತ್ತೊಂದು ವಿಶೇಷ. ಇವರು ದವಳ ಮತ್ತು ಜಯದವಳ ಆಗಮ ಗ್ರಂಥ ರಚನೆ ಮಾಡಿದ್ದರು. ಶ್ರೀಗಳ ನಿಧನ ವಿಚಾರ ತಿಳಿದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶ್ರೀಗಳ ನಿಧನದಿಂದ ಮಠದಲ್ಲಿ ನೀರವ ಮೌನ ಆವರಿಸಿದೆ.